ಕನಿಷ್ಠ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

Prasthutha|

ಬೆಂಗಳೂರು: ಕನಿಷ್ಠ ವೇತನ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ಇಂದು ಧರಣಿ ನಡೆಸಿದರು.

- Advertisement -

ಧರಣಿಯಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ರಾಜ್ಯಾಧ್ಯಕ್ಷೆ ನಾಗಲಕ್ಷ್ಮೀ, ಕೊರೋನ ಸಂಕಷ್ಟದ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದರೂ, ಸರ್ಕಾರ ಸೂಕ್ತ ವೇತನ ನೀಡುತ್ತಿಲ್ಲ. ಪಕ್ಕದ ತಮಿಳುನಾಡು, ಆಂಧ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ಮಾಸಿಕ ವೇತನ ನೀಡಲಾಗುತ್ತಿದೆ. ಆದರೆ, ನಮ್ಮಲ್ಲಿ ಕೇವಲ 6 ಸಾವಿರ ರೂ. ನೀಡುವ ಮೂಲಕ ವಂಚಿಸಲಾಗುತ್ತಿದೆ. 5ರಿಂದ 6 ಸಾವಿರ ವೇತನವು ಜೀವನ ನಿರ್ವಹಣೆಗೆ ಸಾಲದು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಬೆಲೆಯೇ ಇಲ್ಲದಂತಾಗಿದೆ. ನಮಗೆ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ. 12 ಸಾವಿರ ಸಂಬಳ ನಿಗದಿಗೆ ಬೇಡಿಕೆ ಇಡಲಾಗಿದೆ. ಜುಲೈನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗಿತ್ತು. ಸಿ.ಎಂ., ಡಿ.ಸಿ.ಎಂ., ಆರೋಗ್ಯ ಸಚಿವರು ಹೋರಾಟ ನಿಲ್ಲಿಸಿ, ನಿಮ್ಮ ಬೇಡಿಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರೂ ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಜಿಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ತಡೆ ಹಿಡಿಯಲಾಗುತ್ತಿದೆ. ಸರಕಾರವು ನಮಗೆ ಜೀವನ ಭದ್ರತೆಯನ್ನು ಕಲ್ಪಿಸಬೇಕು ಮತ್ತು ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾಗಲಕ್ಷ್ಮೀ ಹೇಳಿದರು.

- Advertisement -

ಇದಕ್ಕೂ ಮೊದಲು ಸಾವಿರಾರು ಆಶಾ ಕಾರ್ಯಕರ್ತೆಯರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಜಾಥಾ ನಡೆಸಿದರು.

Join Whatsapp