ಮುಂಬೈ : ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ದಲಿತ ಸಂಶೋಧಕ ಮತ್ತು ಸಾಮಾಜಿಕ ಕಾರ್ಯಕರ್ತ ಕೆ. ಸತ್ಯನಾರಾಯಣ ಅವರನ್ನು ಸೆ.9ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಎಸ್ ಎ) ಸಮನ್ಸ್ ಜಾರಿಗೊಳಿಸಿದೆ. ಸತ್ಯನಾರಾಯಣ ಅವರು 2018ರ ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ, ಮುಂಬೈ ತಾಜೋಲ ಜೈಲಿನಲ್ಲಿರುವ ವಿಚಾರವಾದಿ, ತೆಲುಗು ಕವಿ ವರವರ ರಾವ್ ಅವರ ಅಳಿಯ.
ಸತ್ಯನಾರಾಯಣ ಅವರ ಸಹೋದರ ಮತ್ತು ಹಿರಿಯ ಪತ್ರಕರ್ತ ಕೆ.ವಿ. ಕುಮಾರನಾಥ್ ಅವರಿಗೂ ಅದೇ ದಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ. ತನಿಖಾ ಸಂಸ್ಥೆಯ ಮುಂಬೈ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಭೀಮಾ ಕೋರೆಗಾಂವ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸತ್ಯನಾರಾಯಣ ತಿಳಿಸಿದ್ದಾರೆ. “ಎನ್ಎಸ್ ಎ ನೋಟಿಸ್ ನಿಂದಾಗಿ, ಕೋವಿಡ್ – 19 ಸೋಂಕು ಮುಂಬೈಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭ ಮತ್ತು ವರವರ ರಾವ್ ಅವರ ಆರೋಗ್ಯ ಹದಗೆಡುತ್ತಿರುವ ಸ್ಥಿತಿಯಲ್ಲಿ, ನಮ್ಮ ಕುಟುಂಬವನ್ನು ತೊಂದರೆಗೀಡು ಮಾಡಿದೆ. ಇಂತಹ ಭಯಾನಕ ಅವಧಿಯಲ್ಲಿ ನಾನು ಮುಂಬೈಗೆ ಪ್ರಯಾಣಿಸುತ್ತಿದ್ದೇನೆ’’ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.
ಇನ್ನೊಂದೆಡೆ, ಕೊಲ್ಕತ್ತಾದ ಪ್ರೊ. ಪಾರ್ಥೋಸಾರಥಿ ರಾಯ್ ಅವರನ್ನು ಸೆ.10ರಂದು ವಿಚಾರಣೆಗೆ ಹಾಜರಾಗುವಂತೆ ಎನ್ ಐಎ ನೋಟಿಸ್ ನೀಡಿದೆ.
ಫೋಟೊ ಕೃಪೆ : Dalith camera via Sroll. in