ಸುರತ್ಕಲ್ ಮಾರುಕಟ್ಟೆ ಹೆಸರಿನಲ್ಲಿ ಭರತ್ ಶೆಟ್ಟಿ 36 ಕೋಟಿ ರೂ. ಹಣ ನುಂಗಿದ್ದಾರೆ: ಮೊಯ್ದಿನ್ ಬಾವಾ ಗಂಭೀರ ಆರೋಪ

Prasthutha|

ಮಂಗಳೂರು: ಸುರತ್ಕಲ್ ಮಾರುಕಟ್ಟೆ ಹೆಸರಿನಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಭರತ್ ಶೆಟ್ಟಿ 36 ಕೋಟಿ ರೂ. ನುಂಗಿದ್ದಾರೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸುರತ್ಕಲ್ ಮಾರುಕಟ್ಟೆ ವಿಷಯದಲ್ಲಿ ಶಾಸಕ ಭರತ್ ಶೆಟ್ಟಿ ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ ಸಚಿವ ಭೈರತಿ ಬಸವರಾಜ್ ಅವರು ಮಾರುಕಟ್ಟೆ ಜಾಗದ ವಿಚಾರದಲ್ಲಿ ತುಂಬಾ ಅಡೆತಡೆಗಳಿವೆ , ಅದನ್ನು ಆದಷ್ಟು ಬೇಗ ನಾವು ಪರಿಹಾರ ಮಾಡಿ ಕಾಮಗಾರಿ ಮುಂದುವರಿಸುತ್ತೇವೆ ಎಂದು  ಹೇಳಿದ್ದರು. ಈ ಪ್ರಶ್ನೋತ್ತರವು ಬಿಜೆಪಿ ನಾಯಕರ ಪ್ರಹಸನದಂತೆ ಕಾಣುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ತಗಾದೆ ಎತ್ತದ ಶಾಸಕ ಭರತ್ ಶೆಟ್ಟಿಗೆ ಅಧಿಕಾರದಿಂದ ಕೆಳಗಿಳಿಯುವ ಮೂರು ತಿಂಗಳ ಮೊದಲು ಮಾರುಕಟ್ಟೆ ನೆನಪಾಗಿರುವುದು ಹಾಸ್ಯಾಸ್ಪದ ಎಂದು ಬಾವಾ ಟೀಕಿಸಿದ್ದಾರೆ. 

ಸುರತ್ಕಲ್ ಮಾರುಕಟ್ಟೆ ನಿರ್ಮಾಣಕ್ಕೆ ಅಡೆತಡೆಗಳಿವೆ ಎಂಬುವುದು ಸುಳ್ಳು. ಮಾರುಕಟ್ಟೆ ನಿರ್ಮಾಣಕ್ಕೆ ಯಾವುದೇ ಅಡೆತಡೆಯಿಲ್ಲ. ಸಿದ್ದರಾಮಯ್ಯ ಸರಕಾರವಿದ್ದಾಗ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆ ಬಳಿಕ ಸಮಿಶ್ರ ಸರಕಾರವಿದ್ದ ಸಮಯದಲ್ಲಿ 14 ಕೋಟಿಯ ಕಾಮಗಾರಿಯೂ ನಡೆದಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಕಾಮಗಾರಿ ಸ್ಥಗಿತಗೊಂಡಿದೆ. ಬಹುಶಃ ಗುತ್ತಿಗೆದಾರರಲ್ಲಿ ಈ ಭಾಗದ ಶಾಸಕರು ಕಮಿಷನ್ ಕೇಳಿದ್ದರಿಂದ ಕಾಮಗಾರಿ ಅರ್ಧದಲ್ಲಿ ನಿಂತು ಹೋಗಿರಬಹುದು , ಇದಲ್ಲದೆ ಮಾರುಕಟ್ಟೆ ನಿರ್ಮಾಣಕ್ಕೆ ಬೇರೆ ಯಾವ ಅಡೆತಡೆಗಳೂ ಇಲ್ಲ. ಸುರತ್ಕಲ್ ಮಾರುಕಟ್ಟೆಯಲ್ಲಿ ಭರತ್ ಶೆಟ್ಟಿ 36 ಕೋಟಿ ಹಣ ನುಂಗಿದ್ದಾರೆ ಎಂದು ಆರೋಪಿಸಿದರು.

- Advertisement -

ಇನ್ನು ಮಾರುಕಟ್ಟೆ ನಿರ್ಮಾಣಕ್ಕೆ 80 ಕೋಟಿ ರೂ.ಹಣ ಮಂಜೂರು ಮಾಡುವ ಪ್ರಸ್ತಾವನೆಯೂ ಇಟ್ಟಿದ್ದಾರೆ. ಮೊದಲು ಮಂಜೂರಾದ ಹಣದಲ್ಲಿ ಕಾಮಗಾರಿ ನಡೆಯಲಿ. ಅದುಬಿಟ್ಟು ಕಲಾಪದಲ್ಲಿ ಪ್ರಶ್ನೆ – ಉತ್ತರದ ನಾಟಕ ಮಾಡಿದರೆ ಜನರು ನಂಬುತ್ತಾರೆ ಎಂಬ ಭ್ರಮೆ ಬಿಟ್ಟುಬಿಡಲಿ ಎಂದು ಬಾವಾ ಕುಟುಕಿದರು. 

ಮಾರುಕಟ್ಟೆಗೆ ಮಂಜೂರಾದ ಹಣ ಬೇರೆ ಬೇರೆ ಕಡೆ ಕಾಮಗಾರಿಗೆ ಬಳಸಿ ಹೆಸರು ಮಾಡಿಕೊಳ್ಳುವ ಮಂಗಳೂರು ಶಾಸಕ ಭರತ್ ಶೆಟ್ಟಿ ನಾನು ಕ್ಷೇತ್ರಕ್ಕೆ 1800 ಕೋಟಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಅವರು ತಾಕತ್ತಿದ್ದರೆ ದಾಖಲೆಗಳನ್ನಿಟ್ಟು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಭೈರತಿ ನಾಗರಾಜ್ ಸುರತ್ಕಲ್ ಮಾರುಕಟ್ಟೆಗೆ ಎರಡು ಬಾರಿ ಭೇಟಿ ಕೊಟ್ಟಿದ್ದಾರೆ ಎಂದೂ ಸುಳ್ಳಾಡಿದ್ದಾರೆ. ಬಿಜೆಪಿ ನಾಯಕರ ಈ ಎಲ್ಲಾ ಸುಳ್ಳುಗಳನ್ನು ನಾವು ಬಹಿರಂಗ ಮಾಡುತ್ತೇವೆ. ಡಿಸೆಂಬರ್ 31 ರಂದು ಸುರತ್ಕಲ್’ನಲ್ಲಿ ಪಾದಯಾತ್ರೆ ಸಂಘಟಿಸಿದ್ದೇವೆ. ಶಾಸಕರ ಭ್ರಷ್ಟಾಚಾರ ಮತ್ತು ಸುಳ್ಳುಗಳನ್ನು ಮಂಗಳೂರು ಜನರ ಮುಂದಿಡುತ್ತೇವೆ ಎಂದು ಮೊಯ್ದೀನ್ ಬಾವಾ ಹೇಳಿದರು.

Join Whatsapp