ಇಸ್ರೇಲ್‌ ನಲ್ಲಿ ಬೆಂಜಮಿನ್‌ ನೆತನ್ಯಾಹು ಆಡಳಿತದ ಕಾಲ ಅಂತ್ಯ ಸನ್ನಿಹಿತ

Prasthutha|

ಜೆರುಸಲೇಂ : ಗಾಝಾದಲ್ಲಿ ಅಮಾಯಕ ಫೆಲೆಸ್ತೀನಿಯನ್ನರ ಮೇಲೆ ಯುದ್ಧ ಸಾರಿ, ಹಿಂಸಾತ್ಮಕ ದೌರ್ಜನ್ಯ ನಡೆಸಿ ಜಗತ್ತಿನಾದ್ಯಂತ ಭಾರೀ ಟೀಕೆಗೆ ಗುರಿಯಾಗಿರುವ ಇಸ್ರೇಲ್‌ ನಲ್ಲಿ ದಶಕದಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸರ್ಕಾರ ಪತನಗೊಳ್ಳುವ ಮುನ್ಸೂಚನೆ ದೊರಕಿದೆ.

ನೆತನ್ಯಾಹು ಸರಕಾರಕ್ಕೆ ಬೆಂಬಲ ನೀಡಿದ್ದ ಮಿತ್ರಪಕ್ಷಗಳು ವಿರೋಧಿ ನಾಯಕರೊಂದಿಗೆ ಕೈ ಜೋಡಿಸಿ, ಹೊಸ ಸರಕಾರ ರಚಿಸುವ ಕುರಿತಂತೆ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಈ ಮಾತುಕತೆಗಳು ಸಫಲವಾಗಿ ಹೊಸ ಮೈತ್ರಿಕೂಟ ರಚನೆಯಾದರೆ, ನೆತನ್ಯಾಹು ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಮಿತ್ರ ಪಕ್ಷವಾದ ಯಾಮಿನಾ ಪಕ್ಷದ ಮುಖಂಡ ನಫ್ತಾಲಿ ಬೆನೆಟ್‌ ಅವರು ವಿರೋಧ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇಸ್ರೇಲ್‌ ಅನ್ನು ರಕ್ಷಣೆ ಮಾಡುವ ಉದ್ದೇಶದಿಂದ ನಾವು ಇಂತಹ ನಿರ್ಧಾರಕ್ಕೆ ಬಂದಿದ್ದೇವೆ. ಇದಕ್ಕೆ ನಮಗೆ ದೇವರ ದಯೆಯಿದೆ ಎಂದು ಭಾವಿಸಿದ್ದೇವೆ. ಉಭಯ ಪಕ್ಷಗಳ ಮುಖಂಡರು ಕ್ರಮವಾಗಿ ಎರಡು ವರ್ಷಗಳ ಕಾಲ ಪ್ರಧಾನಿಗಳಾಗಿ ಅಧಿಕಾರ ನಡೆಸುವ ಒಪ್ಪಂದ ಮಾಡಿಕೊಂಡಿದ್ದೇವೆ. ನಮ್ಮ ಹಕ್ಕು ಮಂಡನೆಗೆ ಬುಧವಾರದ ವರೆಗೆ ಕಾಲಾವಕಾಶವಿದೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಬೆನೆಟ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -