ಬೆಳ್ತಂಗಡಿ| ಸರಕಾರದ ತಾರತಮ್ಯ ನೀತಿ ಖಂಡಿಸಿ ಸೆ.23 ರಂದು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ

Prasthutha|

ಬೆಳ್ತಂಗಡಿ: ಇತ್ತೀಚೆಗೆ ಸುಳ್ಯದ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಎಂಬಿಬ್ಬರ ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಲ್ಲದೆ ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ ಕಪೋಲ ಕಲ್ಪಿತ ಹೇಳಿಕೆ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದ್ದು, ಇದೆಲ್ಲದಕ್ಕೂ ಕಡಿವಾಣ ಹಾಕಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸೆ.23 ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಗ್ಗೂಡುವಿಕೆಯೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ತಿಳಿಸಿದ್ದಾರೆ.

- Advertisement -

ಜಮೀಯತುಲ್ ಫಲಾಹ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ. ಕ. ಜಿಲ್ಲೆಯಲ್ಲಿ ಇತ್ತೀಚಿಗೆ ಕೋಮು ವೈಷಮ್ಯದ ಕಾರಣದಿಂದ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿ ಆಡಳಿತ ವ್ಯವಸ್ಥೆಯು ಪಕ್ಷಪಾತದ ತನಿಖೆ ನಡೆಸುತ್ತಿರುವುದು ಮತ್ತು ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ದುಷ್ಕರ್ಮಿಗಳು ಸುಳ್ಯದ ಮಸೂದ್ ಎಂಬ ಅಮಾಯಕ ಯುವಕನನ್ನು ವ್ಯವಸ್ಥಿತವಾಗಿ ಹತ್ಯೆಗೈದ ಬಳಿಕ ಅದಕ್ಕೆ ಸ್ಥಳೀಯರಿಂದ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ನಾಯಕನ ಹತ್ಯೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಸುರತ್ಕಲ್‌ನ ಫಾಝಿಲ್ ಎಂಬ ಯುವಕನನ್ನು ಹತ್ಯೆ ನಡೆಯಿತು ಎಂದು ಆರೋಪಿಸಿದರು.

ಈ ಎಲ್ಲಾ ಬೆಳವಣಿಗೆಗಳ ಬಳಿಕ ನಿಷ್ಪಕ್ಷಪಾತ ಹಾಗೂ ತಾರತಮ್ಯರಹಿತವಾಗಿ ವರ್ತಿಸಿ ರಾಜಧರ್ಮ ಪಾಲಿಸಬೇಕಾಗಿದ್ದ ರಾಜ್ಯ ಸರಕಾರ, ಹತ್ಯೆ ಪ್ರಕರಣಗಳನ್ನು ಧರ್ಮಾಧಾರಿತವಾಗಿ ನಿರ್ವಹಿಸುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಸ್ಥಳೀಯವಾಗಿ ನಡೆದ ಪ್ರತೀಕಾರದ ಹತ್ಯೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದ್ದರೂ, ಇದರ ತನಿಖೆಯನ್ನು ತರಾತುರಿಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್.ಐ.ಗೆ) ವಹಿಸಲಾಯಿತು. ನಂತರದಲ್ಲಿ ಹಲವಾರು ಮುಸ್ಲಿಮ್ ಮುಖಂಡರು ಮತ್ತು ಮುಸ್ಲಿಮ್ ಯುವಕರ ಮನೆಗೆ ತನಿಖೆ ನೆಪದಲ್ಲಿ ದಾಳಿ ನಡೆಸಿ ಕಿರುಕುಳ ನೀಡಲಾಯಿತು. ಆದರೆ ಮಸೂದ್ ಮತ್ತು ಫಾಝಿಲ್ ಹತ್ಯೆ ಸಂಘಪರಿವಾರದ ದುಷ್ಕರ್ಮಿಗಳಿಂದ ನಡೆದ ವ್ಯವಸ್ಥಿತ ಹತ್ಯೆಯಾಗಿದ್ದರೂ ಆಡಳಿತ ವ್ಯವಸ್ಥೆಯು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಾತ್ರವಲ್ಲ, ಇದರ ಹಿಂದಿನ ಷಡ್ಯಂತ್ರವನ್ನು ಭೇಧಿಸುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯಾಗಲೀ, ರಾಜ್ಯ ಸರಕಾರವಾಗಲೀ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.

- Advertisement -

ಹಾಗೆಯೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ಧೋರಣೆ ಅನುಸರಿಸಲಾಗಿದೆ. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೇ ಕಿ.ಮೀ.ಅಂತರದಲ್ಲಿದ್ದ ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಸುರತ್ಕಲ್ ಫಾಝಿಲ್ ಕುಟುಂಬಕ್ಕೂ ಮುಖ್ಯಮಂತ್ರಿಯಾಗಲೀ, ಸರಕಾರದ ಇತರ ಪ್ರತಿನಿಧಿಗಳಾಗಲೀ ಇದುವರೆಗೂ ಭೇಟಿ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮಸೂದ್‌ ಮತ್ತು ಫಾಝಿಲ್ ಮನೆಗೆ ಭೇಟಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೂ, ಅದನ್ನು ಈಡೇರಿಸಿಲ್ಲ. ಅಲ್ಲದೇ ಸಚಿವರು, ಸ್ಥಳೀಯ ಶಾಸಕರಾಗಲೀ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಅದೇ ರೀತಿ ಪ್ರವೀಣ್ ಕುಟುಂಬಕ್ಕೆ ಸರಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್‌ ವಿತರಿಸಲಾಯಿತಾದರೂ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಯಾವುದೇ ರೀತಿಯ ಪರಿಹಾರವನ್ನು ಘೋಷಿಸಲಾಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಎಲ್ಲಾ ವರ್ಗದ ಜನರೊಂದಿಗೆ ಸಮಾನವಾಗಿ ವ್ಯವಹರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವೊಂದರ ಕರ್ತವ್ಯವಾಗಿರುತ್ತದೆ. ಆದರೆ ಪ್ರಸಕ್ತ ಆಡಳಿತ ಸರಕಾರವು ಒಂದು ನಿರ್ದಿಷ್ಟ ಸಮುದಾಯದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸರಣಿ ಹತ್ಯೆ ಘಟನೆಗಳಿಗೆ ಸಂಬಂಧಿಸಿ ನ್ಯಾಯಯುತ ಕ್ರಮಕ್ಕಾಗಿ ತಾವು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು “ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟ” ಈ ಮೂಲಕ ಮನವಿ ಮಾಡುತ್ತದೆ ಮತ್ತು ಈ ಕೆಳಗಿನ ಬೇಡಿಕೆಗಳನ್ನು ತಮ್ಮ ಮುಂದಿಡುತ್ತದೆ ಎಂದು ತಿಳಿಸಿದರು.

  1. ಪ್ರವೀಣ್ ಹತ್ಯೆಯನ್ನು ಎನ್.ಐ.ಎ ತನಿಖೆಗೆ ವಹಿಸಿದಂತೆ, ಮಸೂದ್ ಮತ್ತು ಪಾಝಿಲ್ ಹತ್ಯೆಯನ್ನೂ ಎನ್.ಐ.ಎ ಗೆ ವಹಿಸಬೇಕು.
  2. ಮಸೂದ್ ಮತ್ತು ಪಾಝಿಲ್ ಹತ್ಯೆಗೆ ಪ್ರೇರಣೆ ನೀಡಿದವರು, ಹಂತಕರಿಗೆ ನೆರವು ನೀಡಿದವರ ಬಗ್ಗೆ ಕೂಲಂಕಷ ತನಿಖೆ ನಡೆಸಿ ಈ ಹತ್ಯೆಗಳ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು.
  3. ಪೊಲೀಸರ ರಾಜಕೀಯ ಪ್ರೇರಿತವಾದ ಹಾಗೂ ಪೂರ್ವಾಗ್ರಹಪೀಡಿತ ತನಿಖೆಯಲ್ಲಿ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದು, ಘಟನೆಯ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಘಟನೆಗಳನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.
  4. ಪ್ರವೀಣ್ ಕುಟಂಬಕ್ಕೆ ಪರಿಹಾರ ವಿತರಿಸಿದಂತೆ, ಮಸೂದ್ ಮತ್ತು ಫಾಝಿಲ್‌ ರವರ ಸಂತ್ರಸ್ತ ಕುಟುಂಬಗಳಿಗೂ ಸರಕಾರದ ವತಿಯಿಂದ ತಲಾ 25 ಲಕ್ಷ ರೂ. ಪರಿಹಾರ ಕಲ್ಪಿಸಲು ಕ್ರಮವಹಿಸಬೇಕು.

ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಸೆ. 23 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ಈ ಮೂಲಕ ತಮಗೆ ಮನವಿ ನೀಡುತ್ತಿರುವುದಾಗಿದೆ. ನ್ಯಾಯದ ನಿರೀಕ್ಷೆಯೊಂದಿಗೆ

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಅಬ್ದುಲ್ ರಝಾಕ್, ಕೆ.ಎಸ್ ಅಬ್ದುಲ್ಲ ಕರಾಯ, ತಲ್‌ಹತ್ ಎಂ.ಜಿ, ಉಸ್ಮಾನ್ ಶಾಫಿ ಮತ್ತು ಉಮರ್ ಗುರುವಾಯನಕೆರೆ ಉಪಸ್ಥಿತರಿದ್ದರು.

Join Whatsapp