ಬೆಂಗಳೂರು ಹಿಂಸಾಚಾರ | ಸತ್ಯಶೋಧನಾ ಸಮಿತಿ ಸದಸ್ಯರಿಗೆ ಸಂಘಪರಿವಾರದ ನಂಟು!

Prasthutha: September 5, 2020

ಸಮಿತಿ ಸದಸ್ಯರ ನೈತಿಕತೆಯೇ ಪ್ರಶ್ನಾರ್ಹ

ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿಟಿಝನ್ ಫಾರ್ ಡೆಮಾಕ್ರಸಿ’ ತನ್ನ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಈ ವರದಿಯ ಕುರಿತಂತೆ ತೀವ್ರ ಆಕ್ಷೇಪ ಕೇಳಿ ಬಂದಿದೆ. ಮಾತ್ರವಲ್ಲ, ಸಮಿತಿ ಸದಸ್ಯರ ಹಿನ್ನೆಲೆ ಸಂಘಪರಿವಾರದೊಂದಿಗೆ ತಳುಕು ಹಾಕಿಕೊಂಡಿರುವ ವಿಚಾರವೂ ಇದೀಗ ಬೆಳಕಿಗೆ ಬಂದಿದೆ.

ಸತ್ಯಶೋಧನಾ ವರದಿಯು ಮೇಲ್ನೋಟಕ್ಕೆ ಬಲಪಂಥೀಯ ಪಕ್ಷಪಾತಿಯಂತೆ ತೋರುತ್ತಿದ್ದು, ಸಮಿತಿಯಲ್ಲಿರುವ ಸದಸ್ಯರ ಹಿನ್ನೆಲೆಯನ್ನು ಗಮನಿಸಿದರೆ ಅವರು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಒಂದು ಕಾಲದಲ್ಲಿ ನಕ್ಸಲ್ ಹಿತೈಷಿಯಾಗಿ ಗುರುತಿಸಿಕೊಂಡಿದ್ದ ಮದನ್ ಗೋಪಾಲ್ ಐಎಎಸ್ ಅಧಿಕಾರಿಯಾಗಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ವರ್ಗಾವಣೆಯ ಶಿಕ್ಷೆಯನ್ನೂ ಅನುಭವಿಸಿದ್ದರು. ನಂತರದ ಬೆಳಣಿಗೆಯಲ್ಲಿ ಅವರು ಸರಕಾರಕ್ಕೆ ಶರಣಾಗಿರುವುದು ಕಂಡು ಬರುತ್ತದೆ. ನಿವೃತ್ತರಾದ ಕೂಡಲೇ ಅವರು ಬಿಜೆಪಿ ಜೊತೆ ಸಖ್ಯವನ್ನು ಬೆಳೆಸಿಕೊಂಡಿದ್ದರು. ಬಿಜೆಪಿಯ ಚುನಾವಣಾ‌ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಕೊನೆಗೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಮಿತಿಯ ಮತ್ತೋರ್ವ ಸದಸ್ಯ ಐಎಫ್ಎಸ್ ಅಧಿಕಾರಿ ಡಾ.ಆರ್.ರಾಜು ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು. ಅದೇ ರೀತಿ ಪತ್ರಕರ್ತ ಸಂತೋಷ್ ತಮ್ಮಯ್ಯ ವಿರುದ್ಧ ಈ ಹಿಂದೆ ಪ್ರವಾದಿ ನಿಂದನೆ ಪ್ರಕರಣವೂ ದಾಖಲಾಗಿತ್ತು. ಬಲಪಂಥೀಯ ಚಿಂತನೆಯನ್ನು ಹೊಂದಿರುವ ಈತ ಭಾಷಣಗಳ ಮೂಲಕ ಹಿಂದು- ಮುಸ್ಲಿಮರ ನಡುವೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದ. ಮಾತ್ರವಲ್ಲ, ಆತನ ಲೇಖನದಲ್ಲಿ ಮುಸ್ಲಿಮ್‌ ವಿರೋಧಿ ಭಾವನೆಗಳೇ ತುಂಬಿದ್ದವು.

ಪ್ರವಾದಿ ನಿಂದನೆಯ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಪಡಿಸಿದ ಬಳಿಕ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಆಗಸ್ಟ್ 11ರಂದು ನಡೆದ ಆಕ್ರೊಶಿತ ಜನರ ಗುಂಪು ಹಿಂಸಾಚಾರವನ್ನು ನಡೆಸಿತ್ತು. ದೂರು ದಾಖಲಿಸಲು ಪೊಲೀಸರು ತೋರಿದ ವಿಳಂಬ ನೀತಿಯು ಘಟನೆಗೆ ಕಾರಣ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು. ಆಡಳಿತ ವ್ಯವಸ್ಥೆಯು ಸತ್ಯ ಶೋಧನಾ ವರದಿಯ ಮೂಲಕ ತನ್ನ ಘೋರ ಪ್ರಮಾದವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆಯೇ ಎಂಬ ಅನುಮಾನಕ್ಕೆ ಈಗ ಬಲ ಬಂದಂತಾಗಿದೆ. ಗಲಭೆ ಪೂರ್ವಯೋಜಿತ ಮತ್ತು ಸಂಘಟಿತವಾಗಿದ್ದು, ಹಿಂದುಗಳನ್ನೇ ಗುರಿಪಡಿಸಲಾಗಿತ್ತು ಎಂದು ವರದಿ ಹೇಳಿದೆ. ಆದರೆ ಘಟನೆ ನಡೆದ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಇಂದಿಗೂ ಕೋಮು ಸಾಮರಸ್ಯ ಜೀವಂತವಾಗಿದೆ. ಈ ಕಾರಣದಿಂದಲೇ ಸಂಘಪರಿವಾರದಿಂದ ಪ್ರಚೋದಿತನಾಗಿದ್ದ ಎನ್ನಲಾದ ನವೀನ್, ಪ್ರವಾದಿಯವರ ಕುರಿತು ನಿಂದನಾತ್ಮಕ ಪೋಸ್ಟ್ ಹಾಕಿದ ಬಳಿಕ ಹಿಂಸಾಚಾರದ ಘಟನೆ ನಡೆದರೂ ಇದು ಕೋಮು ಹಿಂಸಾಚಾರಕ್ಕೆ ತಿರುಗಿರಲಿಲ್ಲ. ಬದಲಿಗೆ ಅಲ್ಲಿನ ಮುಸ್ಲಿಮರು ಸ್ವತಃ ನಿಂತು ಹಿಂದುಗಳ ಸೊತ್ತನ್ನು ರಕ್ಷಿಸಿದ್ದರು. ಮಾನವ ಸರಪಳಿ ರಚಿಸಿ ದೇವಸ್ಥಾನಕ್ಕೆ ಭದ್ರತೆ ನೀಡಿದ್ದು, ಆರೋಪಿ ನವೀನ್ ತಾಯಿಗೆ ರಕ್ಷಣೆ ನೀಡಿದ್ದು ಮುಸ್ಲಿಮರೇ ಆಗಿದ್ದರು. ಆದರೆ ಸತ್ಯ ಶೋಧನಾ ವರದಿಯು ದ್ವೇಷ ಕಾರುವ ವರದಿಯ ಮೂಲಕ ಘಟನೆಗೆ ಕೋಮು ಬಣ್ಣ ಹಚ್ಚುವ ಪ್ರಯತ್ನ ಮಾಡಿದೆ.

ಹಿಂಸಾಚಾರ ನಡೆದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ಪ್ರಮುಖ ಪ್ರತಿಪಕ್ಷಗಳು ಘಟನೆಯಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯವನ್ನು ಬೊಟ್ಟು ಮಾಡಿದ್ದರು. ವಿಪರ್ಯಾಸವೆಂದರೆ ಸರಕಾರಕ್ಕೆ ವರದಿ ಸಲ್ಲಿಸಿರುವ ಈ ಸಮಿತಿಯು ರಾಜ್ಯ ಗುಪ್ತಚರ ಇಲಾಖೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಶಿಫಾರಸು ಮಾಡಿದೆ. ಆ ಮೂಲಕ ಇವರೂ ಕೂಡಾ ಗುಪ್ತಚರ ಇಲಾಖೆಯ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ. ಆದರೂ ಸಮಿತಿಯು ಸರಕಾರವನ್ನು ಮೆಚ್ಚಿಸಲು ಘಟನೆಗೆ ಸಂಬಂಧಪಡದ ಎಸ್ಡಿಪಿಐ ಹಾಗೂ ಪಿಎಫ್ಐಯ ಮೇಲೆಯೂ ಆರೋಪವನ್ನು ಹೊರಿಸಿದೆ.

ಎನ್.ಆರ್.ಸಿ./ಸಿಎಎ ಪ್ರತಿಭಟನೆಯ ವೇಳೆ ದಿಲ್ಲಿಯಲ್ಲಿ ನಡೆದ ಮುಸ್ಲಿಮ್ ವಿರೋಧಿ ಗಲಭೆಯನ್ನು ಹಿಂದು ವಿರೋಧಿ ಗಲಭೆಯನ್ನಾಗಿ ಚಿತ್ರೀಕರಿಸಲು ಸಂಘಪರಿವಾರದ ಶಕ್ತಿಗಳು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದವು. ಆ ವೇಳೆಯೂ ಬಲ ಪಂಥೀಯ ಸಂಘಟನೆಗಳು ಸತ್ಯಶೋಧನೆಯ ಹೆಸರಿನಲ್ಲಿ ಏಕಪಕ್ಷೀಯವಾದ ವರದಿಯನ್ನು ಸಿದ್ಧಪಡಿಸಿದ್ದವು. ಒಟ್ಟಿನಲ್ಲಿ ‘ಸಿಟಿಝನ್ ಫಾರ್ ಡೆಮಾಕ್ರಸಿ’ ಸತ್ಯಶೋಧನಾ ಸಮಿತಿಯಲ್ಲಿರುವ ಸದಸ್ಯರ ಹಿನ್ನೆಲೆಗಳು ವರದಿಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!