ಬಂಡೇಮಠದ ಬಸವಲಿಂಗ ಶ್ರೀ ಆತ್ಮಹತ್ಯೆ: ಚುರುಕುಗೊಂಡ ತನಿಖೆ, ಹಲವರ ವಿಚಾರಣೆ

Prasthutha|

ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕುದೂರು ಪೊಲೀಸರು, ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಅರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

- Advertisement -

ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದು ಅವರ ಮೊಬೈಲ್ ಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ ಮಾಡಿದ ಯುವತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

- Advertisement -

ಈ ನಡುವೆ ಸ್ವಾಮೀಜಿ ಸಾವಿನ ಪ್ರಕರಣವು ಮುಖ್ಯಮಂತ್ರಿ ಕಚೇರಿ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು  ವೀರಶೈವ ಸಮಾಜದ ಮುಖಂಡ ಪರಶಿವಯ್ಯ ನೇತೃತ್ವದ ತಂಡವೊಂದು ಭೇಟಿ ಮಾಡಲು ಸಿದ್ಧತೆ ನಡೆಸಿದೆ. ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿದ ಹಲವು ಬೆಳವಣಿಗೆಗಳ ಬಗ್ಗೆ ಈ ತಂಡವು ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ವಿವರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಿಡಿಗೆ ಹೆದರಿ ಆತ್ಮಹತ್ಯೆ:

ಕಂಚುಗಲ್ ಬಂಡೇಮಠದ ಬಸವಲಿಂಗಶ್ರೀ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಬರೆದಿಟ್ಟಿರುವ ಡೆತ್ ನೋಟ್ ನ ಐದು ಪುಟಗಳು ನಾಪತ್ತೆಯಾಗಿವೆ. ಪ್ರಕರಣ ಸಂಬಂಧ ರಾಮನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾತನಾಡಿ ಆತ್ಮಹತ್ಯೆ ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಪತ್ತೆಯಾಗಿವೆ. ಡೆತ್ ನೋಟ್ ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು ಅವರೆಡೂ ಲಾಕ್ ಆಗಿದ್ದು ಅವುಗಳ ಕಾಲ್ ವಿವರ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಎಫ್ ಎಸ್ ಎಲ್ (Forensic Science Laboratory) ಗೆ ಮೊಬೈಲ್:

ನಮಗೆ ಸಿಕ್ಕ ಡೆತ್ ನೋಟ್, ವೈರಲ್ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್ ನೋಟ್ ಸಿಕ್ಕಿ ನಮ್ಮ ಗಮನಕ್ಕೆ ತರದಿದ್ದರೆ ಕೇಸ್ ಹಾಕ್ತೇವೆ. ಡೆತ್ ನೋಟ್, ಮೊಬೈಲ್ ಫೋನ್ ಎಫ್ ಎಸ್ ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಲಾಗುವುದು. ಮಠದ ಮೇಲೆ ಯಾರೂ ಸಂಶಯ ವ್ಯಕ್ತಪಡಿಸುತ್ತಿಲ್ಲ’  ಎಂದು ಸಂತೋಷ್ ಬಾಬು ತಿಳಿಸಿದ್ದಾರೆ.

ಶ್ರೀಗಳಿಗೆ ಇದ್ದ ಬೆದರಿಕೆ ಕರೆಗಳ ಬಗ್ಗೆ ಜನರು ಮಾತಾಡುತ್ತಿರುವುದು ಗಮನಕ್ಕೆ ಬಂದಿದ್ದು ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಸ್ವಾಮೀಜಿ ವಿಡಿಯೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಸಂತೋಷ್ ಬಾಬು ಹೇಳಿದರು.

Join Whatsapp