ಬೆಳಗಾವಿ: ವಿರೋಧಗಳೇನೇ ಇದ್ದರೂ ಜನಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಹಿತಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸುವುದು ಅನಿವಾರ್ಯ ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆಯ ವಿಷಯದಲ್ಲಿ ವಿರೋಧಗಳು ಕೇಳಿ ಬರುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಕಾಯ್ದೆಯನ್ನು ಜಾರಿಗೊಳಿಸುವಾಗ ಪರ, ವಿರೋಧಗಳು ಇದ್ದೇ ಇರುತ್ತವೆ ಎಂದು ನುಡಿದರು.ಆದರೆ ಇಂತಹ ಪರ-ವಿರೋಧಗಳೇನೇ ಇರಲಿ ಆದರೆ ಜನಹಿತಕ್ಕಾಗಿ ಈ ಕಾಯ್ದೆ ಅನಿವಾರ್ಯ ಎಂದರು.
ಮತಾಂತರ ನಿಷೇಧ ಕಾಯ್ದೆಯನ್ನು ರೂಪಿಸುವ ಸಂಬಂಧ ಈಗಾಗಲೇ ಕಾನೂನು ಇಲಾಖೆಯ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ. ಅದು ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸರ್ಕಾರದ ಮುಂದಿಡಲಿದೆ. ಅದು ನೀಡುವ ಕರಡನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚೆ ನಡೆಸುತ್ತೇವೆ. ಆನಂತರ ವಿಧಾನಮಂಡಲದಲ್ಲಿ ಮಂಡಿಸುತ್ತೇವೆ ಎಂದರು.
ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ಕಾರ ತಯಾರಾಗಿದೆ ಎಂದು ಅವರು ಸಿದ್ಧತೆಗಳ ಕುರಿತು ವಿವರಿಸಿದರು. ರಾಜ್ಯದಲ್ಲಿ ಮಳೆಯಿಂದಾದ ಹಾನಿಯ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಸದನದಲ್ಲಿ ಪ್ರತಿಪಕ್ಷಗಳು ಮಾತನಾಡಲಿ.ಅಲ್ಲಿಯೇ ಉತ್ತರಿಸುತ್ತೇನೆ ಎಂದು ಹೇಳಿದರು.
ವಾರಣಾಸಿಯಲ್ಲಿ ನಡೆಯಲಿರುವ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸುತ್ತೇನೆ.ರಾಜ್ಯದ ಅಭಿಪ್ರಾಯಗಳನ್ನು ಹೇಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ನುಡಿದರು.