ಬ್ಯಾಲೆಟ್ ಪೇಪರ್ ಬಳಕೆ| ಕಾಯ್ದೆ ಜಾರಿಗೊಳಿಸಲು ಮಹಾರಾಷ್ಟ್ರ ಸರಕಾರ ನಿರ್ಧಾರ

Prasthutha|

- Advertisement -

ಮುಂಬೈ: ವಿಧಾನ ಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಗಳನ್ನು ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಧಾನಸಭೆಯಲ್ಲಿ ಮಸೂದೆಯನ್ನು ತರಲಾಗುವುದು ಎಂದು ವಿಧಾನಸಭಾ ಸ್ಪೀಕರ್ ನಾನಾ ಪಟೋಲೆ ಹೇಳಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಮಾರ್ಚ್‌ನಲ್ಲಿ ನಡೆಯಲಿರುವ ಸದನದ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಪರಿಚಯಿಸಲಾಗುವುದು. ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುವುದು. ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಬೇಕೆಂದು ರಾಜ್ಯವೊಂದು ಶಾಸನವನ್ನು ಜಾರಿಗೊಳಿಸುತ್ತಿರುವುದು ಇದೇ ಮೊದಲು. ಪ್ರಸ್ತುತ ದೇಶಾದ್ಯಂತ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗುತ್ತಿದೆ.

ಚುನಾವಣೆಗಳು ಮತ್ತು ಸಂಬಂಧಿತ ವಿಷಯಗಳು ಜನ ಪ್ರಾತಿನಿಧ್ಯ ಕಾಯ್ದೆಯಡಿ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಶಾಸಕಾಂಗಗಳು ಶಾಸನ ರಚಿಸಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಅಂತಹ ಶಾಸನವನ್ನು ಜಾರಿಗೊಳಿಸಲು ಸಂವಿಧಾನದ 328 ನೇ ವಿಧಿಯ ಅಡಿಯಲ್ಲಿ ಸರಕಾರವು ಅಧಿಕಾರವನ್ನು ಹೊಂದಿದೆ ಎಂಬುದು ಮಹಾರಾಷ್ಟ್ರ ಸರಕಾರದ ವಾದ. ಈ ವಿಷಯವನ್ನು ರಾಜ್ಯ ಚುನಾವಣಾ ಆಯೋಗದೊಂದಿಗೆ ಚರ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸಭೆಯಲ್ಲಿ ಸಚಿವ ಅಮಿತ್ ದೇಶ್ಮುಖ್ ಮತ್ತು ಮುಖ್ಯ ಚುನಾವಣಾ ಅಧಿಕಾರಿ ಬಲದೇವ್ ಸಿಂಗ್ ಭಾಗವಹಿಸಿದ್ದರು.

- Advertisement -

ಎಲೆಕ್ಟ್ರಾನಿಕ್ ಮತ ಯಂತ್ರಗಳಿಗೆ ಪಾರದರ್ಶಕತೆ ಇಲ್ಲ, ಬ್ಯಾಲೆಟ್ ಪೇಪರ್ ಮರಳಿ ತರಬೇಕೆಂದು ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ. ರಾಜ್ಯದ ಆಡಳಿತಾರೂಢ ಮಹಾವಿಕಾಸ್ ಅಖಾಡಿಯಲ್ಲಿರುವ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಈ ಬೇಡಿಕೆಯನ್ನು ಪದೇ ಪದೇ ಎತ್ತಿವೆ. ಎಲೆಕ್ಟ್ರಾನಿಕ್ ಮತ ಯಂತ್ರವೇ ಸಾಕು ಎಂಬುದು ಬಿಜೆಪಿಯ ವಾದ. ಚುನಾವಣಾ ಆಯೋಗವೂ ಅದೇ ಅಭಿಪ್ರಾಯವನ್ನು ಹೊಂದಿದೆ.

Join Whatsapp