ಅಚಂಚಲ ವಿಶ್ವಾಸದ ಮಹಾ ಮಾದರಿಯೇ ಬಕ್ರೀದ್

Prasthutha|

✍️ ಎಫ್. ನುಸೈಬಾ ಕಲ್ಲಡ್ಕ

- Advertisement -

ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ನಮ್ಮ ಮುಂದಿದೆ. ಸಡಗರ ಸಂಭ್ರಮದ ಜೊತೆಗೆ ಅದರ ಹಿನ್ನೆಲೆ, ಅಂತಃಸತ್ವವನ್ನು ಅರ್ಥೈಸಿ ಹಬ್ಬವನ್ನು ಆಚರಿಸುವುದು ಹೆಚ್ಚು ಪುಣ್ಯದಾಯಕವೆನಿಸುತ್ತದೆ.

ಬಕ್ರೀದ್ ಎಂದಾಕ್ಷಣ ಸ್ಮೃತಿಪಟಲದಲ್ಲಿ ಮೂಡಿ ಬರುವ ಚಿತ್ರಣ  ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂ ಹಾಗೂ ಅವರ ಕುಟುಂಬದ ತ್ಯಾಗೋಜ್ವಲ ಬದುಕು. ದೈವಾಜ್ಞೆಗೂ ಮೀರಿದ್ದು ಯಾವುದೂ ಇಲ್ಲ ಎಂಬುದನ್ನು ಜೀವನದುದ್ದಕ್ಕೂ ಸಾಕ್ಷೀಕರಿಸಿದ ಇಬ್ರಾಹಿಂ ಅಲೈಹಿಸ್ಸಲಾಂರ ಮಾದರೀ ಬದುಕಿನ ಅತ್ಯುತ್ತಮ ಆದರ್ಶವೇ ಬಕ್ರೀದ್ ನ ಅಂತಃಸತ್ವ.

- Advertisement -

ಇರಾಕಿನ ಬ್ಯಾಬಿಲೋನಿಯಾ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂರ ಜನ್ಮ ನಾಡು. ಸೂರ್ಯ, ಚಂದ್ರ, ನಕ್ಷತ್ರಗಳ ಜೊತೆಯಲ್ಲೇ ತನ್ನನ್ನು ಆರಾಧಿಸಬೇಕೆಂದು ಆದೇಶಿಸಿದ್ದ ಸ್ವಯಂ ಘೋಷಿತ ದೈವ ನಮ್ರೂದನ ಆಡಳಿತ ಕಾಲವಾಗಿತ್ತು ಅದು. ಒಂದು ರಾತ್ರಿಯಲ್ಲಿ ಬಿದ್ದ ಕನಸಿನಿಂದ ನಮ್ರೂದ್ ಭಯಭೀತಗೊಳ್ಳುತ್ತಾನೆ. ಆ ಕನಸಿನ ವ್ಯಾಖ್ಯಾನಕ್ಕಾಗಿ ಆಸ್ಥಾನದ ಪಂಡಿತರನ್ನು ಕರೆಸಿಕೊಳ್ಳುತ್ತಾನೆ. “ನವ ಶಿಶುವೂಂದು ಇರಾಕಿನ ಮಣ್ಣಿನಲ್ಲಿ ಜನ್ಮ ತಾಳಲಿದೆ. ಅದರೊಂದಿಗೆ ನಿನ್ನ ಆರಾಧನಾಲಯಗಳು ಕುಸಿದು ಬೀಳಲಿದೆ, ನಿನ್ನ ಸೈನಿಕ ಶಕ್ತಿ ನಾಶ ಹೊಂದಲಿದೆ. ಸತ್ಯ ಸ್ಥಾಪಿಸಲಿದೆ. ಮಿಥ್ಯ ಅಳಿಸಲಿದೆ” ಇದಾಗಿತ್ತು ಪಂಡಿತರ ಉತ್ತರ. ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಅರಿತಾಗ ನಮ್ರೂದ್ ನಾಡಿನ ಜನತೆಗೆ ಹೀನಾಯವಾದ ಆದೇಶವೊಂದನ್ನು ಹೊರಡಿಸುತ್ತಾನೆ. ಇನ್ನು ಮುಂದೆ ಯಾವ ಹೆಣ್ಣು ಗರ್ಭ ಧರಿಸಕೂಡದು. ಈಗಾಗಲೆ ಗರ್ಭ ಧರಿಸಿರುವ ಮಹಿಳೆಯರು ಗಂಡು ಮಗುವಿಗೆ ಜನ್ಮ ನೀಡಿದಲ್ಲಿ ಆ ಮಕ್ಕಳು ಜೀವಂತ ಸಮಾಧಿಯಾಗಲಿದೆ”. ಸರ್ವಾಧಿಕಾರಿ ರಾಜನ  ಮುಂದೆ  ಪ್ರಜೆಗಳು  ಮೌನವಾದರು.

ಇಂತಹ ಕಠಿಣ ಸಂಧರ್ಭದಲ್ಲಿ ತಾಯಿ ಅಮೀಲ  ಯಾರೂ ತಿಳಿಯದಂತೆ ಇಬ್ರಾಹಿಂ ರಿಗೆ ಜನ್ಮನೀಡುತ್ತಾರೆ. ರಹಸ್ಯ ಕೇಂದ್ರವೊಂದರಲ್ಲಿ, ಮಗುವನ್ನು ಬೆಳೆಸಿದರು. ಅಸಾಧಾರಣ ವೇಗದಲ್ಲಿ ಬೆಳೆದು ಬಂದ ಇಬ್ರಾಹಿಂರಿಗೆ ಸುತ್ತಲೂ ನಡೆಯುತ್ತಿದ್ದ ಅಂಧಾಚರಣೆಗಳು ಚಿಂತೆಗೀಡುಮಾಡಿತು. ನಿರ್ದಿಷ್ಟ ಅವಧಿಯಲ್ಲಿ ಉದಯಿಸಿ ಅಸ್ತಮಿಸುವ ಸೂರ್ಯ, ಚಂದ್ರ ನಕ್ಷತ್ರಗಳು ಹೇಗೆ ತಾನೆ ಆರಾಧನೆಗೆ ಅರ್ಹವಾಗುತ್ತದೆ?  ಇವೆಲ್ಲವನ್ನು ಸೃಷ್ಟಿಸಿ, ನಿಯಂತ್ರಿಸುವ ಅಲ್ಲಾಹನಲ್ಲವೇ ಆರಾಧ್ಯನು ಇಲ್ಲ, ಇದು ಸರಿಯಲ್ಲ. ಜನರನ್ನು ಚಿಂತಿಸುವಂತೆ ಮಾಡಬೇಕು. ಅಲ್ಲಾಹನು ಮಾತ್ರವೆ ಏಕ ಇಲಾಹನು, ಅವನಲ್ಲದೆ ಆರಾಧನೆಗೆ ಅರ್ಹರಿಲ್ಲ. ದೀನೀ ಭೋಧನೆಯು ಆರಂಭವಾಯಿತು. ಮೊದಲ ಪ್ರಭೋಧನೆ ತಂದೆಯ ಬಳಿ.

“ಅಪ್ಪ..ಪರಮ ಕಾರುಣ್ಯನ ಕಠೋರ ಶಿಕ್ಷೆಯು ನಿಮಗೆ ಬಂದೆರಗುವುದರಿಂದ ನಾನು ಭಯಪಡುತ್ತೇನೆ” 

ಆದರೆ ಯಾವುದೇ ಕಾರಣಕ್ಕೂ ತಂದೆ ಮಗನನ್ನು ಒಪ್ಪಲಿಲ್ಲ. “ನೀನು ನಿನ್ನ ಮಾರ್ಗದಿಂದ ಹಿಂದೆ ಸರಿಯದಿದ್ದರೆ ನಿನಗಿಲ್ಲಿ ಉಳಿಗಾಲವಿಲ್ಲ.ಈ ಮನೆಯಲ್ಲಿ ನಿನಗೆ ಜಾಗವಿಲ್ಲ. ಇಲ್ಲಿಂದ ತೊಲಗು. ತಂದೆಯ ಕಠಿಣಾಜ್ಞೆ. ಇಲ್ಲ, ಭವಿಷ್ಯವನ್ನು ಭಯಪಟ್ಟು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.. ಇಬ್ರಾಹಿಂ ಅಲೈಹಿಸ್ಸಲಾಂ ಅಚಲರಾದರು.

ದಿನಗಳು ಉರುಳುತ್ತಿತ್ತು. ಇರಾಕಿನಲ್ಲಿ ಕ್ಷಾಮ ಉಂಟಾಯಿತು. ಆಹಾರ ಧಾನ್ಯಗಳಿಲ್ಲದೆ ಜನ ಪರದಾಡಿದರು. ನಮ್ರೂದನೇ ದೇವನೆಂದು ಸಾಷ್ಟಾಂಗವೆರಗಿದರೆ ಮಾತ್ರವೇ ಅರಮನೆಯಲ್ಲಿ ಶೇಖರಿಸಿಟ್ಟಿದ್ದ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿತ್ತು.

ಇಬ್ರಾಹಿಂ ಅಲೈಹಿಸ್ಸಲಾಂ ನಮ್ರೂದನನ್ನು ಭೇಟಿಯಾದರು. “ನಾನು ಯಾರು”? ನಮ್ರೂದ್ ಪ್ರಶ್ನಿಸಿದ. “ನನ್ನಂತಯೇ ನೀನೂ ಓರ್ವ ಅಲ್ಲಾಹನ ದಾಸ.”

ಕೋಪಾಗ್ನಿಯಿಂದ ಉರಿಯುತ್ತಿದ್ದ ನಮ್ರೂದ್ ಇಬ್ರಾಹಿಂ ಅಲೈಹಿಸ್ಸಲಾಂ ರಿಗಾಗಿ ಬೃಹತ್ ಅಗ್ನಿ ಕುಂಡವನ್ನು ನಿರ್ಮಿಸಿದ. ಪರ್ವತಗಳು ಉರಿಯುವಂತಹ ಬೆಂಕಿಯ  ಮಧ್ಯೆ ಇಬ್ರಾಹಿಂ ಅಲೈಹಿಸ್ಸಲಾಂರನ್ನು ಎಸೆಯಲಾಯಿತು. ಸತ್ಯದ ವಾಹಕರಾಗಿದ್ದ ಇಬ್ರಾಹಿಂ ಅಲೈಹಿಸ್ಸಲಾಂ ಅಲ್ಪವೂ ಧೃತಿಗೆಡಲಿಲ್ಲ.

 “ಹಸ್ಬುನಲ್ಲಾಹು ವನಿಅಮಲ್ ವಕೀಲ್”..ಇಬ್ರಾಹಿಂ ಅಲೈಹಿಸ್ಸಲಾಂ ಉಚ್ಚರಿಸುತ್ತಲೇ ಇದ್ದರು.

ಕೆಲವು ದಿನಗಳ ನಂತರ ಅಲ್ಲಿಗೆ ಬಂದ ನಮ್ರೂದನಿಗೆ ಆಶ್ಚರ್ಯ ಕಾದಿತ್ತು. ಕಟ್ಟಿ ಹಾಕಿದ ಸಂಕೋಲೆಗಳು ಕರಿದು ಹೋಗಿದ್ದರೂ ಇಬ್ರಾಹಿಂ ಅಲೈಹಿಸ್ಸಲಾಂರ ಒಂದು ರೋಮವನ್ನೂ  ಅಗ್ನಿ ಸ್ಪರ್ಶಿಸಿರಲಿಲ್ಲ. ಮುಖದಲ್ಲಿ  ಪ್ರಸನ್ನತೆ ಇತ್ತು. ಇಬ್ರಾಹಿಂ ಅಲೈಹಿಸ್ಸಲಾಂರ ಈಮಾನಿನ ಮುಂದೆ ನಮ್ರೂದನ ಪೈಶಾಚಿಕತೆ ನೆಲಕಚ್ಚಿತ್ತು. ಈ ಘಟನೆಯ ನಂತರ ಹಲವಾರು ಮಂದಿ ಇಸ್ಲಾಂ ಸ್ವೀಕರಿಸಿದ್ದರು  ಹಾಗೂ  ನಮ್ರೂದ್ ನ ಮಗಳು ಅವರಲ್ಲಿ ಒಬ್ಬರಾಗಿದ್ದರೆಂದು ಚರಿತ್ರೆಗಳು ಹೇಳುತ್ತವೆ.

ಕಾಲ ಚಕ್ರ ಉರುಳುತ್ತಿತ್ತು. ಸತ್ಯದ ಹಾದಿಯೆಡೆಗೆ ಜನರನ್ನು ಸೆಳೆಯುವ ಮಹತ್ತರ ಕಾರ್ಯದೊಂದಿಗೆ  ಪತ್ನಿ ಸಾರಾ ಜೊತೆಯಲ್ಲಿ ಇರಾಕಿನಿಂದ ಸಿರಿಯಾ, ನಂತರ ಈಜಿಪ್ಟ್ ಮತ್ತೆ ಪ್ಯಾಲೆಸ್ತೀನ್ ಹೀಗೆ ಪ್ರಯಾಣ ಮುಂದುವರಿದಿತ್ತು. ಮಕ್ಕಳಿಲ್ಲದ ಕಾರಣಕ್ಕೆ ಹಾಜರಾ ಅವರನ್ನು ವಿವಾಹವಾಗಬೇಕೆಂದು ಪತ್ನಿ ಸಾರಾ ರ. ಅ. ನಿರ್ದೇಶಿಸಿದರು.

ಹೀಗೆ ಇಬ್ರಾಹಿಂ ಅಲೈಹಿಸ್ಸಲಾಂ ಹಾಗೂ ಬೀವಿ  ಹಾಜರಾ ಅವರ ದಾಂಪತ್ಯದಲ್ಲಿ ಅರಳಿದ ಸುಂದರ ಕುಸುಮ ವೇ. ಇಸ್ಮಾಯಿಲ್ ಅಲೈಹಿಸ್ಸಲಾಂ.

ಇಳಿ ವಯಸ್ಸಿನಲ್ಲಿ ಲಭಿಸಿದ ಪುತ್ರ ಭಾಗ್ಯವನ್ನು ಅನುಭವಿಸುವ ಅವಕಾಶ  ಹೆಚ್ಚು ಕಾಲ ಉಳಿಯಲಿಲ್ಲ. ಇಬ್ರಾಹಿಂ ಅಲೈಹಿಸ್ಸಲಾಂ ಪತ್ನಿ ಹಾಜರಾ ಹಾಗೂ ಮಗುವನ್ನು ಕರೆದುಕೊಂಡು ಮಕ್ಕಾ ಯಾತ್ರೆ ಆರಂಭಿಸಿದರು. ಸುಡು ಬಿಸಿಲಿನ ಮರುಭೂಮಿ. ಕಾಬಾದ ಪರಿಸರದಲ್ಲಿ ಸಫಾ  ಮರ್ವಾ ಪರ್ವತಗಳ ನಡುವಿನ ನಿರ್ಜನ ಪ್ರದೇಶದಲ್ಲಿ ಪತ್ನಿ ಮಗುವನ್ನು ಒಂಟಿಯಾಗಿಸಿ ಇಬ್ರಾಹಿಂ ಅಲೈಹಿಸ್ಸಲಾಂ ಹೊರಟು ನಿಂತರು. “ಯಾಕೆ ಹೀಗೆ ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ?  ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ನಾವಿಬ್ಬರೂ ಹೇಗೆ ಇರಲಿ”  ಪತ್ನಿಯ ಪ್ರಶ್ನೆಗೆ ಉತ್ತರಿಸದೆ ಮುಂದೆ ನಡೆದರು.

“ಅಲ್ಲಾಹನ ಆಜ್ಞೆಯ ಅನುಸಾರವೆ ಈ ನಿರ್ಧಾರ”!?  ಮರು ಪ್ರಶ್ನಿಸಿದರು ಹಾಜರಾ

ಹೌದು ಎಂಬಂತೆ ತಲೆಯಾಡಿಸಿ ಪತಿ ಮುಂದೆ ಸಾಗಿದರು. ಮರು ಮಾತನಾಡಲಿಲ್ಲ ಹಾಜರಾ. ಅಲ್ಲಾಹನ ಆಜ್ಞೆಯನ್ನು ಪಾಲಿಸಿಯೇ ಸಿದ್ಧ ಎಂದು ಮಗುವನ್ನು ಅಪ್ಪಿಕೊಂಡರು. ದಿನ ಕಳೆದಂತೆ ಕೈಯಲ್ಲಿದ್ದ ಕರ್ಜೂರ ನೀರು ಖಾಲಿಯಾಗಿತ್ತು. ಮಗುವಿಗೆ ಹಾಲಿಲ್ಲ. ಮಾತೃ ಹೃದಯ ಮರುಗಿತು. ಕಣ್ಣುಗಳು ತೇವಗೊಂಡವು. ಹನಿ ನೀರಿಗಾಗಿ ತಾಯಿ ಮಗು ಪರಿತಪಿಸಿದರು. ಎಂತಹ ಕಲ್ಲು ಹ್ರದಯವೂ ಕರಗುವಂತಹ ಸನ್ನಿವೇಶ. ಮಗುವನ್ನು ನೆಲದಲ್ಲಿ ಮಲಗಿಸಿ, ಯಾರಾದರೂ ಕಾಣ ಸಿಗುವರೆಂಬ ಕಾತರದಿಂದ ಸಫಾ ಬೆಟ್ಟದ ಮೇಲೇರಿದರು. ಇಲ್ಲ, ಯಾರೂ ಕಾಣಲಿಲ್ಲ. ಕೆಳಗಿಳಿದು ಬಂದು ಮರ್ವ ಬೆಟ್ಟದ ಮೇಲೇರಿದರು. ಇಲ್ಲ.., ಯಾರೂ ಇಲ್ಲ. ಮತ್ತೆ ಸಫಾ ಬೆಟ್ಟದ ಮೇಲೇರಿದರು. ಕೆಳಗಿಳಿದರು. ಮತ್ತೆ ಮರ್ವ ಪರ್ವತ. ಹೀಗೆ ಏಳು ಬಾರಿ ಅತ್ತಿಂದಿತ್ತ ಓಡಾಡಿದರು. ಈ ಓಡಾಟದ ಪ್ರತೀಕವೇ ಇಂದು ಹಜಾಜಿಗಳ ಹಜ್ ಕರ್ಮದ ಒಂದು ಭಾಗವಾಗಿರುವ ಸಫಾ ಮರ್ವ ನಡುವಿನ ಓಟ.

ಮಗುವಿನ ಬಳಿ ಬಂದ ಹಾಜರಾ ಬೀವಿಗೆ ಆಶ್ಚರ್ಯ ಕಾದಿತ್ತು. ಮಗು ಇಸ್ಮಾಯಿಲ್ ಕಾಲು ಬಡಿದ ಜಾಗದಲ್ಲಿ ನೀರಿನ ಒರತೆ ಉಂಟಾಗಿ ಧಾರಳ ನೀರು ಹರಿಯತೊಡಗಿತ್ತು. ಹಾಜರಾ ಅಲ್ಲಾಹನನ್ನು ಸ್ತುತಿಸಿದರು. ಇದಾಗಿದೆ ಮುಸ್ಲಿಂ ಜಗತ್ತು ಇಂದು ಹಾತೊರೆದು ಕುಡಿಯುತ್ತಿರುವ ಪುಣ್ಯ ಜಲ ಝಮ್ ಝಮ್. ಅದುವರೆಗೂ ನಿರ್ಜನ ಪ್ರದೇಶವಾಗಿದ್ದ ಮಕ್ಕಾ ಮರುಭೂಮಿಯಲ್ಲಿ ಜನಸಂದಣಿ ದಟ್ಟವಾಗತೊಡಗಿತ್ತು. ವ್ಯಾಪಾರ ಸಂಘಗಳು ಅಲ್ಲೇ ನೆಲೆಯೂರತೊಡಗಿದವು. ವರ್ಷಗಳು ಕಳೆಯಿತು. ಇಬ್ರಾಹಿಂ ಅಲೈಹಿಸ್ಸಲಾಂ ರ ಆಗಮನವಾಯಿತು. ಹಾಜರಾ ಆದರದಿಂದಲೇ ಪತಿಯನ್ನು ಬರಮಾಡಿಕೊಂಡರು. ಇಬ್ರಾಹಿಂ ಮಗನನ್ನು ಕರೆದು ಹೇಳಿದರು. “ಮಗನೇ, ನಿನ್ನನ್ನು ಬಲಿಯರ್ಪಿಸಬೇಕೆಂದು ಅಲ್ಲಾಹನ ಆಜ್ಞೆಯಾಗಿದೆ.”

“ಅಪ್ಪ, ಅಲ್ಲಾಹು ನಿಮ್ಮೊಂದಿಗೆ ಕಲ್ಪಿಸಿರುವುದನ್ನು ನೀವು ಮಾಡಿರಿ. ಹಿಂಜರಿಯಬೇಡಿ”

ಮಗನ ಧೃಢವಾದ ಮಾತುಗಳು.  ಇಬ್ರಾಹಿಂ ಅಲೈಹಿಸ್ಸಲಾಂ ರಿಗೆ ಸಮಾಧಾನವಾಯಿತು. ಇಬ್ಬರೂ ಹೊರಟು ಹೋದರು. ಮಿನಾದತ್ತ ಪಯಣ. ಈ ಸಮಯದಲ್ಲಿ ಇಬ್ಲೀಸ್ ಅವರನ್ನು ತಡೆಯಲು ಶತಪ್ರಯತ್ನ ನಡೆಸಿದ. ಅಚಲವಾದ ವಿಶ್ವಾಸದ ಮುಂದೆ ಆತನ ತಂತ್ರಗಳೆಲ್ಲವೂ ನಿಶ್ಫಲವಾಯಿತು.  ಜಮ್ರತುಲ್ ಅಕಬಾದ ಬಳಿ ತಲುಪಿದಾಗ ಇಬ್ಲೀಸ್ ಮತ್ತೆ ಪ್ರತ್ಯಕ್ಷನಾಗಿ ಕುತಂತ್ರವನ್ನು ಮುಂದುವರಿಸಿದ. ಕೋಪಗೊಡ ಇಬ್ರಾಹಿಂ ಅಲೈಹಿಸ್ಸಲಾಂ ಏಳು ಕಲ್ಲುಗಳನ್ನು ಎಸೆದು ಆತನನ್ನು ಓಡಿಸುತ್ತಾರೆ. ಇದೇ ರೀತಿ ಜಮ್ರತುಲ್ ವುಸ್ತ ಹಾಗೂ ಜಮ್ರತುಲ್ ಊಲಾ ಎಂಬ ಸ್ಥಳಗಳಲ್ಲಿಯೂ ಪುನರಾವರ್ತನೆ ಆಗುತ್ತದೆ.  ಈ ಘಟನೆಯ ಸ್ಮರಣಾರ್ಥ ಇಂದು ಹಜ್ಜ್ ನ ಸಂಧರ್ಭದಲ್ಲಿ ಈ ಮೂರೂ ಸ್ಥಳಗಳಲ್ಲಿ ಕಲ್ಲೆಸೆತ ವಿಧಿಯನ್ನು ಕೈಗೊಳ್ಳಲಾಗುತ್ತದೆ. 

ಬಲಿಕಾರ್ಯವು ಆರಂಭಿಸುವ ಮೊದಲು ಇಸ್ಮಾಯಿಲ್ ಅಲೈಹಿಸ್ಸಲಾಂ ತಂದೆಯೊಂದಿಗೆ ಹೀಗೆ ಹೇಳುತ್ತಾರೆ ” ಅಪ್ಪಾ.. ನನ್ನನ್ನು ಸರಿದು ಮಲಗಿಸಿ, ನನ್ನ ಕೈಕಾಲುಗಳನ್ನು ಕಟ್ಟಿ ಹಾಕಿ, ಕಾರಣ ನನ್ನ ಮುಖ ನೋಡಿ ನಿಮ್ಮ ಮನಸ್ಸು ಒದ್ದಾಡದಿರಲಿ. ನನ್ನ ಬಟ್ಟೆಗಳನ್ನು ಕಳಚಿರಿ.. ಯಾಕೆಂದರೆ ಅದರಲ್ಲಿ ರಕ್ತದ ಕಲೆಗಳನ್ನು ಕಂಡು ತಾಯಿ ಮರುಗದಿರಲಿ.. ಕತ್ತಿಯನ್ನು ಹರಿತವಾಗಿಸಿ  ಬಲಿ ಕಾರ್ಯ ಬೇಗನೆ ಪೂರ್ಣಗೊಳಿಸಿರಿ..!   ಮಗನ ಪ್ರಬುದ್ಧ ಮಾತುಗಳು  ಇಬ್ರಾಹಿಂರ  ಅಲೈಹಿಸ್ಸಲಾಂ ರಿಗೆ  ಮತ್ತಷ್ಟು ಬಲ ನೀಡಿತ್ತು. ಕತ್ತಿಯನ್ನು ಮಗನ ಕುತ್ತಿಗೆ ಹತ್ತಿರ ತರುತ್ತಿದ್ದಂತೆ ಅಶರೀರವಾಣಿಯೊಂದು ಕೇಳಿ ಬಂದಿತ್ತು. ಇಬ್ರಾಹಿಂ ನೀನು ನಿನ್ನ ಸ್ವಪ್ನವನ್ನು ಸಾಕ್ಷೀಕರಿಸಿದೆ. ಕೇಳುತ್ತಿದ್ದಂತೆ  ಜಿಬ್ರೀಲ್ ಅಲೈಹಿಸ್ಸಲಾಂ ಸ್ವರ್ಗದಿಂದ ಆಡೊಂದನ್ನು ತಂದು ಇಸ್ಮಾಯಿಲ್ ರ ಬದಲಾಗಿ ಈ ಆಡನ್ನು ಬಲಿ ಅರ್ಪಿಸಲು ನಿರ್ದೇಶಿಸಿದರು.  ಇಬ್ರಾಹಿಂ ಅಲೈಹಿಸ್ಸಲಾಂ ಹಾಗೆ ಮಾಡಿದರು.  ಆ ಕ್ಷಣದಲ್ಲಿ ಇಬ್ರಾಹಿಂ ಅಲೈಹಿಸ್ಸಲಾಂ ಹೇಳಿದರು  “ಅಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್”. ಇಸ್ಮಾಯಿಲ್  ಅಲೈಹಿಸ್ಸಲಾಂ ಹೇಳಿದರು ” ಲಾ ಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್”.

ಆಗ ಜಿಬ್ರೀಲ್ ರೀತಿಯಾಗಿ ಹೇಳುತ್ತಾರೆ  ” ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಂದ್ “

 ಇಂದು ಜಾಗತಿಕವಾಗಿ ಮೊಳಗುತ್ತಿರುವ ಸುಶ್ರಾವ್ಯ ತಕ್ಬೀರ್ ನ  ತಾತ್ಪರ್ಯವಿದು. (ಕುರ್ ಆನಿನ ಅಧ್ಯಾಯ   37 ರ 100- 107 ಆಯತ್ ಗಳಲ್ಲಿ ಇದರ ಉಲ್ಲೇಖವಿದೆ.) ಮಗನನ್ನು ಮರಳಿ ಪಡೆದ ಹಾಜರಾ ಹಾಗೂ ಇಬ್ರಾಹಿಂ ಅಲೈಹಿಸ್ಸಲಾಂ ಅಲ್ಲಾಹನನ್ನು ಸ್ತುತಿಸಿದರು.

ಅಲ್ಲಾಹನ ಸಂತೃಪ್ತಿಗಾಗಿ ಸರ್ವಸ್ವ ತ್ಯಾಗಕ್ಕೂ ಸಿದ್ದರಾಗಿ ಇಹಲೋಕದ ಕ್ಷಣಿಕತೆಯನ್ನು ಸಾರಿದ ಈ  ಭಾವನಾತ್ಮಕ  ಕ್ಷಣಕ್ಕೆ ದುಲ್ ಹಜ್ ಮಾಸವು ಸಾಕ್ಷಿಯಾಗಿತ್ತು..

ಜೀವನದುದ್ದಕ್ಕೂ  ಪರೀಕ್ಷೆಗಳನ್ನು ಎದುರಿಸಿದ, ಧರ್ಮ ಪ್ರಚಾರದ ಹಾದಿಯಲ್ಲಿ ಸರ್ವಾಧಿಕಾರಿ ರಾಜನಿಂದ ಪೀಡನೆಗಳನ್ನು ಅನುಭವಿಸಿದರೂ ಸತ್ಯದ ಪರವಾಗಿ ಅಚಲವಾಗಿ ನಿಂತ, ಸರ್ವವನ್ನು ಅಲ್ಲಾಹನಿಗೆ ಸಮರ್ಪಿಸಿದ, ದಿನದ ಐದು ಹೊತ್ತು ಸ್ಮರಿಸಲ್ಪಡುತ್ತಿರುವ ಕ್ರಾಂತಿಕಾರಿ ನಾಯಕ ಇಬ್ರಾಹಿಂ ಅಲೈಹಿಸ್ಸಲಾಂ ರನ್ನು ಮಾದರಿಯಾಗಿಸಿ ಅನುಸರಿಸಲು ಆಧುನಿಕ ಮುಸ್ಲಿಂ ಸಮುದಾಯಕ್ಕೆ ಸಾಧ್ಯವಾಗಿದೆಯೇ? ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

“ನಿಸ್ವಾರ್ಥ ಹೇಳಲು ಚೆಂದ, ಸ್ವಾರ್ಥ ಅನುಭವಿಸಲು ಚೆಂದ” ಬಂಧುವೊಬ್ಬರು ಬರೆದ ಸಾಲುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಇತಿಹಾಸದ ಚರಿತ್ರೆಗಳನ್ನು ಕೇಳಿ ಅಭಿಮಾನ ಪಡುವ ನಾವು ಅಂತಹ ಸನ್ನಿವೇಶಗಳು ಎದುರಿಸಬೇಕಾಗಿ ಬಂದಾಗ ಸ್ವಾರ್ಥಿಗಳಾಗಿ ದೂರ ಸರಿಯುತ್ತೇವೆ. ಎಂತಹ ವಿಪರ್ಯಾಸ ಅಲ್ಲವೇ..

ಸತ್ಯ,  ನ್ಯಾಯ  ದಮನಿಸಲ್ಪಡುತ್ತಿರುವ  ವರ್ತಮಾನ ಕಾಲಘಟ್ಟದಲ್ಲಿ ನಾವಿದ್ದೇವೆ. ಇಸ್ಲಾಮಿನ ಹೆಸರಿನಲ್ಲಿ ಜೀವಗಳು ಬಲಿಯಾಗಿ ಕುಟುಂಬಗಳು ಅನಾಥವಾಗುತ್ತಿವೆ. ಅನ್ಯಾಯಕ್ಕೆ ಮನ್ನಣೆ ಕೊಡದವರು ಎಲ್ಲವನ್ನೂ ಕಳೆದುಕೊಂಡು ಕಂಬಿಗಳ ಹಿಂದೆ  ಏಕಾಂಗಿಗಳಾಗಿದ್ದಾರೆ. ಇವರುಗಳ ಹೃದಯದಲ್ಲಿ  ಪ್ರೀತಿಯ, ಆತ್ಮೀಯತೆಯ, ವಿಶ್ವಾಸದ, ನಂಬಿಕೆಯ ಹೊಂಗಿರಣಗಳನ್ನು ಬೆಳಗಿಸುವ ಮೂಲಕ ಬಕ್ರೀದ್ ಅನ್ನು ಅರ್ಥಪೂರ್ಣಗೊಳಿಸಬೇಕು. ಇನ್ ಶಾ ಅಲ್ಲಾಹ್..