ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನಲೆ ಮಂಗಳವಾರ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿ ಪರಿಶೀಲನೆ ನಡೆಸಿದರು.
ಎನ್ ಹೆಚ್ ಅಧಿಕಾರಿಗಳು ಹಾಗೂ ಡಿಬಿಎಲ್ ಸಂಸ್ಥೆಯ ಎಂಜಿನಿಯರ್ ಜೊತೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ ಅಲೋಕ್ ಕುಮಾರ್ ಇದೇ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು. ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಿಸುತ್ತಿಲ್ಲ. ನಮ್ಮ ಸಿಬ್ಬಂದಿ ಕಂಡರೆ ವಾಹನ ಸವಾರರಿಗೆ ಒಂದು ಭಯ ಇರುತ್ತದೆ. ಬೆಂಗಳೂರಿನಿಂದ ಬೆಳಗಾವಿಯವರೆಗೆ ಹೋದರೂ ಒಬ್ಬ ಸಿಬ್ಬಂದಿ ಸಹ ಸಮವಸ್ತ್ರದಲ್ಲಿ ಕಾಣುವುದಿಲ್ಲ. ಸಿಬ್ಬಂದಿ ಕೇವಲ ರಿಫ್ಲೆಕ್ಟ್ ಜಾಕೆಟ್ ಹಾಕಿಕೊಂಡು ಇದ್ದರೆ ಸಾಕು. ಜನ ಭಯದಿಂದ ವಾಹನದ ವೇಗ ತಗ್ಗಿಸುತ್ತಾರೆ ಎಂದು ತಿಳಿಹೇಳಿದರು.