ಉ.ಪ್ರ.: ಮಗಳ ಮಾರಾಟದ ಸುಳ್ಳು ಸುದ್ದಿ ಹಬ್ಬಿಸಿ ಬಜರಂಗ ದಳದ ಗೂಂಡಾಗಳಿಂದ ದಲಿತ ವ್ಯಕ್ತಿಯ ಥಳಿಸಿ ಹತ್ಯೆ

Prasthutha|

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಗೂಂಡಾಗಳ ಅಟ್ಟಹಾಸ ನಿಲ್ಲುತ್ತಲೇ ಇಲ್ಲ. ಹಲವು ಸರಣಿ ಗುಂಪು ಹತ್ಯೆಗಳ ಬಳಿಕ, ಇದೀಗ ದಲಿತ ವ್ಯಕ್ತಿಯೊಬ್ಬರನ್ನು ಕೋಲು ಹಾಗೂ ರಾಡ್ ಗಳಿಂದ ಭೀಕರವಾಗಿ ಥಳಿಸಿ ಹತ್ಯೆ ಮಾಡಲಾದ ಘಟನೆ ಅಲ್ಲಿನ ಮೈನ್ ಪುರಿ ಜಿಲ್ಲೆಯಲ್ಲಿ ನಡೆದಿದೆ. ದಲಿತ ವ್ಯಕ್ತಿ ಸರ್ವೇಶ್ ಕುಮಾರ್ ದಿವಾಕರ್ ಎಂಬವರು ತಮ್ಮ ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುಂಪೊಂದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ ಮಾಡಿದೆ. ಸರ್ವೇಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳು ಬಜರಂಗ ದಳದ ಗೂಂಡಾಗಳು ಎಂದು ಸಮಾಜವಾದಿ ಪಾರ್ಟಿ ಆಪಾದಿಸಿರುವುದಾಗಿ ‘ಸಿಯಾಸತ್ ಡಾಟ್ ಕಾಂ’ ವರದಿ ಮಾಡಿದೆ.

- Advertisement -

ಸರ್ವೇಶ್ ಕುಮಾರ್ ಮೇಲೆ ಭಾನುವಾರವೇ ಹಲ್ಲೆ ನಡೆದಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ, ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಸರ್ವೇಶ್ ಕುಮಾರ್ ಒಂದು ಫುಡ್ ಸ್ಟಾಲ್ ನಡೆಸುತ್ತಿದ್ದರು. ಲಾಕ್ ಡೌನ್ ನಿಂದಾಗಿ ಇತ್ತೀಚೆಗೆ ಸಮಸ್ಯೆಯಲ್ಲಿದ್ದ ತಮ್ಮ 16 ವರ್ಷದ ಮಗಳನ್ನು ಅವರು ನೋಯ್ಡಾದ ತಮ್ಮ ಸಂಬಂಧಿಯ ಮನೆಗೆ ಕಳುಹಿಸುವವರಿದ್ದರು. ಇನ್ನೊಂದೆಡೆ, ಕೆಲವು ವರದಿಗಳ ಪ್ರಕಾರ, ಸರ್ವೇಶ್ ಅವರ ಮಗಳಿಗೆ ಕೆಲವರು ಇತ್ತೀಚೆಗೆ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಅವರು ತಮ್ಮ ಮಗಳನ್ನು ನೋಯ್ಡಾದ ಸಂಬಂಧಿಯ ಮನೆಗೆ ಕಳುಹಿಸಲು ನಿರ್ಧರಿಸಿದ್ದರು ಎನ್ನಲಾಗಿದೆ.

ಆದರೆ, ಈ ಬಗ್ಗೆ ಕೆಲವು ದುಷ್ಕರ್ಮಿಗಳು ಸರ್ವೇಶ್ ತಮ್ಮ ಮಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದರು. ಸರ್ವೇಶ್ ಮೇಲೆ ಹಲ್ಲೆ ನಡೆಸುವ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಮೃತ ಸರ್ವೇಶ್ ಕುಮಾರ್ ಕುಟುಂಬಕ್ಕೆ ಸಮಾಜವಾದಿ ಪಾರ್ಟಿ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. “ಮೈನ್ ಪುರಿಯಲ್ಲಿ ಬಜರಂಗದಳದ ಗೂಂಡಾಗಳಿಂದ ದಲಿತ ಸರ್ವೇಶ್ ಕುಮಾರ್ ಅವರ ಹತ್ಯೆ ನಡೆದಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಸಂತಾಪಗಳು. ಸಮಾಜವಾದಿ ಪಕ್ಷ ಸಂತ್ರಸ್ತರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುತ್ತದೆ. ಸರಕಾರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಸಮಾಜವಾದಿ ಪಾರ್ಟಿ ತಿಳಿಸಿರುವುದಾಗಿ ‘ಸಿಯಾಸತ್’ ವರದಿ ತಿಳಿಸಿದೆ.

ಘಟನೆಯ ಬಗ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಅವರೂ ಖಂಡಿಸಿದ್ದು, ಇತ್ತೀಚೆಗೆ ನಡೆದ ಹಲವು ಗುಂಪು ಹತ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಎಲ್ಲಾ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಮತ್ತು ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೋಮವಾರ ಕುಶಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಪೊಲೀಸರ ಸಮ್ಮುಖದಲ್ಲೇ ಗುಂಪೊಂದು ಹೊಡೆದು ಕೊಂದಿತ್ತು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಇಂತಹ ಹಲವಾರು ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯ ಜಂಗಲ್ ರಾಜ್ ಆಗಿ ಪರಿವರ್ತನೆಯಾಗುತ್ತಿದೆ ಎಂಬ ಆಪಾದನೆಗಳು ಕೇಳಿ ಬರುತ್ತಿವೆ.



Join Whatsapp