ನಟನ ಸಾವಿನ ಸುದ್ದಿ ಹಿಂದೆ ಬಿದ್ದಿರುವ ಮಾಧ್ಯಮಗಳು | 2 ವರ್ಷದಲ್ಲಿ 84,000 ರೈತರು, ಕಾರ್ಮಿಕರ ಆತ್ಮಹತ್ಯೆ ಸುದ್ದಿಯೇ ಅಲ್ಲ!

Prasthutha|

ನವದೆಹಲಿ : ಕಳೆದ ಕೆಲವು ದಿನಗಳಿಂದ ಬಹುತೇಕ ಎಲ್ಲಾ ಹಿಂದಿ ದಿನಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತಂತೆ ಪ್ರಮುಖ ಸುದ್ದಿಗಳನ್ನು ಸರಣಿಯಾಗಿ ಪ್ರಕಟಿಸಿವೆ. ಯಾವುದೇ ಸಾಕ್ಷ್ಯವಿಲ್ಲದಿದ್ದರೂ, ದಿನಕ್ಕೊಂದು ಕತೆ ಕಟ್ಟಿ ಹೊಚ್ಚ ಹೊಸದು ಎಂಬಂತೆ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಆದರೆ, ಇದೇ ವೇಳೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 84,000ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರ ಆತ್ಮಹತ್ಯೆ ನಡೆದಿವೆ, ಈ ಬಗ್ಗೆ ಯಾವುದೇ ಸುದ್ದಿ ವಾಹಿನಿ ಅಥವಾ ಪತ್ರಿಕೆಗಳಲ್ಲಿ ಒಂದು ಸಾಲು ಚರ್ಚೆ ನಡೆದಿಲ್ಲ ಎಂಬುದು ವಿಷಾದನೀಯ.

- Advertisement -

ಕಳೆದ ಐದು ವರ್ಷಗಳಲ್ಲಿ 60,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸರಕಾರದ ಅಂಕಿ ಅಂಶಗಳಿಂದಲೇ ತಿಳಿದು ಬರುತ್ತದೆ. 2019ರಲ್ಲಿ ಸುಮಾರು 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 10,349 ರೈತರು ಆತ್ಮಹತ್ಯೆ ಮಾಡಿದ್ದಾರೆ. 2019ರಲ್ಲಿ ಸುಮಾರು 32,559 ಕಾರ್ಮಿಕರು ಆತ್ಮಹತ್ಯೆ ಮಾಡಿದ್ದರೆ, 2018ರಲ್ಲಿ 30132 ಮಂದಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆದರೆ. ಜೂ. 14ಕ್ಕೆ ಭಾರತದ ಮಾಧ್ಯಮಗಳಿಗೆ ಒಂದೇ ಒಂದು ಸಾಲು ಬ್ರೇಕಿಂಗ್ ನ್ಯೂಸ್ ಸಿಕ್ಕಿತು. ಅದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಸುದ್ದಿಯಾಗಿತ್ತು. ಅಲ್ಲಿಂದಾಚೆಗೆ, ಪ್ರತಿದಿನ ಭಾರತದ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಇದೇ ಸುದ್ದಿ.

- Advertisement -

ರಿಪಬ್ಲಿಕ್, ರಿಪಬ್ಲಿಕ್ ಭಾರತ್, ಜೀ ನ್ಯೂಸ್, ಆಜ್ ತಕ್, ನ್ಯೂಸ್ 18, ಇಂಡಿಯಾ ಟಿವಿ ಮುಂತಾದ ಸುದ್ದಿ ವಾಹಿನಿಗಳಿಗೆ ಜನರನ್ನು ಕೋವಿಡ್ 19 ಪ್ರಕರಣಗಳು, ದೇಶದ ಆರ್ಥಿಕತೆ, ಬಡತನ, ಹಸಿವು, ಆಹಾರ ಅಭದ್ರತೆ, ಪೌಷ್ಠಿಕಾಂಶದ ಕೊರತೆ, ಮಹಿಳಾ ಸುರಕ್ಷತೆ, ರೈತರ ಆತ್ಮಹತ್ಯೆ ಮುಂತಾದ ಅಗತ್ಯ ವಿಷಯಗಳಿಂದ ಜನ ಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯಲು ಸುಶಾಂತ್ ಸಿಂಗ್ ಆತ್ಮಹತ್ಯೆ ದೊಡ್ಡ ಅಸ್ತ್ರವಾಗಿ ಸಿಕ್ಕಿತು. ಜನರಿಗೆ ನಿಜವಾಗಿಯೂ ರೈತರ ಆತ್ಮಹತ್ಯೆಯ ಗಂಭೀರತೆಯ ಬಗ್ಗೆ ಗೊತ್ತೇ ಇಲ್ಲ. ಯಾಕೆಂದರೆ, ಮಾಧ್ಯಮಗಳು ಇಂತಹ ವಿಷಯಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಭಾರತದ ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಯ ವಿಷಯ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕುವುದೇ ಇಲ್ಲ.

JusticeForRajput ಎಂಬಂತಹ ಹ್ಯಾಶ್ ಟ್ಯಾಗ್ ಗಳು ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ನಂತಹ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಆದರೆ, ಈ ಸುದ್ದಿ ವಾಹಿನಿಗಳು ಯಾವತ್ತಾದರೂ, ರೈತರಿಗೆ ನ್ಯಾಯಕೇಳಿ ಹ್ಯಾಶ್ ಟ್ಯಾಗ್ ಗಳನ್ನು ಬಳಸಿದ್ದು ನೋಡಿದ್ದೀರಾ? ಕಳೆದ ಐದು ವರ್ಷಗಳಲ್ಲಿ ಅವರು ರೈತರ ಸಮಸ್ಯೆ ಪರವಾಗಿ ಮಾತನಾಡಿದ್ದಾರ?

ಇನ್ನೊಂದೆಡೆ, ಅವರು ಸುಶಾಂತ್ ಸಾವಿಗೂ ನ್ಯಾಯ ಒದಗಿಸುತ್ತಿಲ್ಲ. ಅವರು ಇತರ ವಿಷಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ, ಸುಶಾಂತ್ ಸಾವಿನ ಸುತ್ತ ಅನೈತಿಕವಾದ, ಭಾವನೆರಹಿತ, ಅಸಭ್ಯ ವರದಿಗಳಿಗೆ ಅವು ಪ್ರಾಮುಖ್ಯತೆ ನೀಡುತ್ತಿವೆ. ಅವರ ಸಾವು ಆರಂಭದಲ್ಲಿ ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ, ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.
ಮಾಧ್ಯಮ ಅಧ್ಯಯನ ಕೇಂದ್ರವು 2015ರಲ್ಲಿನ ಎರಡು ತಿಂಗಳು ನಡೆಸಿದ ಅಧ್ಯಯನದ ಪ್ರಕಾರ, ದೈನಿಕ್ ಜಾಗರಣ್, ಟೈಮ್ಸ್ ಆಫ್ ಇಂಡಿಯಾ, ದ ಹಿಂದೂ ಸೇರಿದಂತೆ ಆರು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದುದು ಶೂನ್ಯ. ಎರಡನೇ ತಿಂಗಳಲ್ಲಿ ‘ದ ಹಿಂದೂ’ ಶೇ.1.37 ವರದಿಗಳನ್ನು ರೈತರಿಗೆ ಸಂಬಂಧಿಸಿ ಮೊದಲ ಪುಟ ಮೀಸಲಿಟ್ಟಿತ್ತು. ಡಿಡಿ ನ್ಯೂಸ್, ಜೀ ನ್ಯೂಸ್, ಎನ್ ಡಿಟಿವಿ ಸೇರಿದಂತೆ ಆರು ಸುದ್ದಿ ವಾಹಿನಿಗಳಲ್ಲಿ ಏಳು ನಿಮಿಷಕ್ಕಿಂತ ಹೆಚ್ಚು ಗ್ರಾಮೀಣ ಭಾರತದ ಕುರಿತ ವರದಿಗಳು ಪ್ರಕಟವಾಗಿಲ್ಲ.

1995-2015ರ ವರೆಗೆ ಒಟ್ಟು 2,96,438 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಎನ್ ಸಿಆರ್ ಬಿ ಅಂಕಿಅಂಶಗಳು ತಿಳಿಸುತ್ತವೆ. ಮಹಾರಾಷ್ಟ್ರ ಒಂದರಲ್ಲೇ 2009-2016ರ ನಡುವೆ 25,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ, ಮಾಧ್ಯಮಗಳು ದೇಶದ ಜನಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳ ಕುರಿತು ಗಮನ ಹರಿಸುವುದಿಲ್ಲ. ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಸಾಮೂಹಿಕ ಅಭಿಯಾನ ನಡೆಸುತ್ತಿಲ್ಲ.

ಕೃಪೆ : ಸ್ನೊಬರ್ ಖಾನ್ | ಮುಸ್ಲಿಂ ಮಿರರ್

Join Whatsapp