ಉ.ಪ್ರ.: ‘ಜೈ ಶ್ರೀರಾಮ್’ ಎನ್ನಲು ಒತ್ತಾಯಿಸಿ, ಹಲ್ಲೆಗೈದು ಟ್ಯಾಕ್ಸಿ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು

ನೋಯ್ಡಾ : ಮುಸ್ಲಿಂ ಟ್ಯಾಕ್ಸಿ ಚಾಲಕರೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು, ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದುದಲ್ಲದೆ, ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ಭಾನುವಾರ ರಾತ್ರಿ ವೇಳೆ ಈ ಘಟನೆ ನಡೆದಿದೆ.

ಭಾನುವಾರ ರಾತ್ರಿ, 20ರ ಹರೆಯದ ಮುಹಮ್ಮದ್ ಸಬೀರ್ ಗೆ ಅವರ ತಂದೆ, ಆಫ್ತಾಬ್ ಆಲಂರಿಂದ ಫೋನ್ ಕರೆ ಬಂದಿದೆ. ಫೋನ್ ಕರೆ ಬಂದ ಕೆಲವು ನಿಮಿಷಗಳ ವರೆಗೆ ಏನೂ ಮಾತನಾಡುತ್ತಿರುವುದು ಕೇಳುತ್ತಿರಲಿಲ್ಲ. ಆಫ್ತಾಬ್ ಅವರು ಮೌನವಾಗಿದ್ದರು. ಸ್ವಲ್ಪ ಹೊತ್ತಲ್ಲಿ, ಕೆಲವು ವ್ಯಕ್ತಿಗಳು ತಮ್ಮ ತಂದೆಯ ಹೆಸರು ಕೇಳುತ್ತಿರುವುದು ಕೇಳಿಸಿತ್ತು. ಹೀಗಾಗಿ, ಏನೋ ಸಮಸ್ಯೆಯಾಗಿದೆ ಎಂದರಿತು ಸಬೀರ್ ಫೋನ್ ಕರೆ ರೆಕಾರ್ಡ್ ಗೆ ಹಾಕಿದ್ದರು. ಹೆಸರು ಕೇಳುತ್ತಿದ್ದವರು, ಕುಡಿತದ ಮತ್ತಲ್ಲಿದ್ದಂತೆ ಅನಿಸುತಿತ್ತು. ಅವರು ತಮ್ಮ ತಂದೆಗೆ ‘ಜೈ ಶ್ರೀರಾಮ್ ಹೇಳು’ ಎಂದು ಒತ್ತಾಯಿಸುತ್ತಿರುವುದು ಫೋನ್ ನಲ್ಲಿ ಕೇಳಿಸುತಿತ್ತು. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ ಎಂದು ಸಬೀರ್ ಹೇಳಿರುವುದಾಗಿ ‘ದ ವೈರ್’ ವರದಿ ಮಾಡಿದೆ.

- Advertisement -

ಒಬ್ಬ ವ್ಯಕ್ತಿ “ಜೈ ಶ್ರೀರಾಮ್ ಹೇಳು, ಜೈ ಶ್ರೀರಾಮ್ ಹೇಳು” ಎಂದು ಕರೆ ಆರಂಭವಾಗಿ ಸುಮಾರು 8:39 ನಿಮಿಷಗಳ ನಂತರ ಒತ್ತಾಯಿಸುತ್ತಿರುವುದು ಫೋನ್ ಕರೆಯಲ್ಲಿ ಕೇಳಿ ಬಂದಿದೆ ಎಂದು “ದ ವೈರ್’ ವರದಿ ತಿಳಿಸಿದೆ.

ಅದರ ನಂತರ ಸಬೀರ್ ಮಾತನಾಡುತ್ತಿರುವುದು ಏನೂ ಕೇಳಿಸುತ್ತಿರಲಿಲ್ಲ. ಆದರೆ, 11 ನಿಮಿಷಗಳ ನಂತರ, ಒಬ್ಬ ವ್ಯಕ್ತಿ “ಉಸಿರು ನಿಂತಿದೆ’’ ಎಂದು ಹೇಳುತ್ತಿರುವುದು ಕೇಳಿಸಿದೆ. ಸುಮಾರು 40 ನಿಮಿಷಗಳ ಕರೆ ರೆಕಾರ್ಡ್ ಆಗಿದೆ. ಬಳಿಕ ಸಾಬಿರ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದು, ಅವರು ಆಫ್ತಾಬ್ ರನ್ನು ಪತ್ತೆ ಹಚ್ಚಲು ಸಹಕರಿಸಿದರು. ಕೊನೆಗೂ ಆಫ್ತಾಬ್ ಅವರ ಮೃತದೇಹ ಬಾದಲ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಆಫ್ತಾಬ್ ಆಲಂ ನೋಯ್ಡಾದ ತ್ರಿಲೋಕ್ ಪುರಿ ನಿವಾಸಿ. 1996ರಿಂದ ಅವರು ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ ತಮ್ಮ ಪರಿಚಿತರೊಬ್ಬರಿಗೆ ಡ್ರಾಪ್ ನೀಡಲು ಹೋಗಿ ಹಿಂದಿರುಗುವಾಗ ಈ ದುಷ್ಕೃತ್ಯ ನಡೆದಿದೆ. ಲಾಕ್ ಡೌನ್ ಅವಧಿಯಲ್ಲಿ ಕೊರೋನ ಹರಡುವ ಭೀತಿಯಿಂದ ಆಫ್ತಾಬ್ ಹೊರ ಹೋಗಿರಲಿಲ್ಲ.ಈಗ ಸ್ನೇಹಿತರೊಬ್ಬರು ತಮ್ಮನ್ನು ಉತ್ತರ ಪ್ರದೇಶದ ಬುಲಂದ್ ಶಹರ್ ಗೆ ಬಿಟ್ಟುಬರುವಂತೆ ಹೇಳಿದ್ದಕ್ಕಾಗಿ ಅವರು ಹೊರಹೋಗಿದ್ದರು.

ಆಫ್ತಾಬ್ ರ ಮೂವರು ಗಂಡು ಮಕ್ಕಳೂ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಸಬೀರ್ ಬಿ.ಕಾಂ. ಅಂತಿಮ ವರ್ಷದಲ್ಲಿದ್ದು, ಇನ್ನೊಬ್ಬ ಮಗ ಶೇ.92ರಷ್ಟು ಅಂಕ ಪಡೆದು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುದೇ ಆಫ್ತಾಬ್ ಅವರ ಗುರಿಯಾಗಿತ್ತು. ಆದರೆ, ಈಗ ಅವರನ್ನೇ ದುಷ್ಟರು ಬಲಿ ಪಡೆದಿದ್ದಾರೆ.

ಆದಾಗ್ಯೂ, ಬಾದಲ್ ಪುರ ಪೊಲೀಸ್ ಠಾಣಾ ಸಿಬ್ಬಂದಿ, ಇದೊಂದು ಗುಂಪು ಹತ್ಯೆ ಅಥವಾ ದ್ವೇಷ ಅಪರಾಧ ಎಂಬುದನ್ನು ಒಪ್ಪಿಲ್ಲ, ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.