ಬೆಂಗಳೂರು : ವಿಚಾರಣೆಯ ನೆಪದಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯ ಅಧಿಕಾರಿಯಾಗಿದ್ದ ಕೆ. ಅರ್ಜುನ್ ವಿರುದ್ಧದ ಜಾಮೀನು ಅರ್ಜಿ ನಿರಾಕರಿಸಲ್ಪಟ್ಟಿದೆ. ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ಕೋರ್ಟ್ ಈ ತೀರ್ಪು ನೀಡಿದೆ.
ಈ ಘಟನೆ ಅತ್ಯಂತ ಹೇಯ ಕೃತ್ಯದ ಲಕ್ಷಣವುಳ್ಳದ್ದಾಗಿದೆ. ಸಂತ್ರಸ್ತನ ಮೇಲೆ ಮೂತ್ರ ಮಾಡಿರುವುದೇ ಅಲ್ಲದೆ, ನೆಲದಿಂದ ಅದನ್ನು ನೆಕ್ಕುವಂತೆ ಮಾಡಲಾಗಿದೆ. ಇಂತಹ ದೌರ್ಜನ್ಯದ ಕ್ರಿಯೆಯು ಯಾವುದೇ ವ್ಯಕ್ತಿಯ ವೈಯಕ್ತಿಕ ಘನತೆಯನ್ನು ನಾಶಪಡಿಸುತ್ತದೆ. ವೈಯಕ್ತಿಕ ಘನತೆ ಒಬ್ಬರ ಅಂತರಾಳದ ಭಾವನೆ ಮತ್ತು ಅದು ಆತ್ಮಾಭಿಮಾನ, ಸ್ವಾಭಿಮಾನದ ಗುಣಗಳನ್ನು ಹೊಂದಿದೆ. ಇದು ಒಬ್ಬ ವ್ಯಕ್ತಿ ಯೋಚಿಸುವ ಮತ್ತು ತಮ್ಮ ಬಗ್ಗೆ ತಾನೇ ಭಾವಿಸುವ ವಿಧಾನವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೂರು ದಾಖಲಿಸುವಲ್ಲಿ ವಿಳಂಬವಾಗಿರುವ ಕುರಿತು ಅರ್ಜುನ್ ಸಲ್ಲಿಸಿರುವ ಆಕ್ಷೇಪಗಳನ್ನು ಕೋರ್ಟ್ ತಿರಸ್ಕರಿಸಿದೆ. ಈ ರೀತಿಯ ದೌರ್ಜನ್ಯಕ್ಕೊಳಗಾದ ಯಾವುದೇ ವ್ಯಕ್ತಿಯು, ತೀರಾ ಆಘಾತದಲ್ಲಿರುತ್ತಾನೆ ಮತ್ತು ಖಂಡಿತವಾಗಿಯೂ ಇಂತಹ ಘಟನೆಗಳನ್ನು ಬಹಿರಂಗಪಡಿಸುವ ಅಥವಾ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಪುನೀತ್ ಎಂಬ ದಲಿತ ಯುವಕನನ್ನು ಪ್ರಕರಣವೊಂದರ ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದ ಪಿಎಸ್ ಐ ಅರ್ಜುನ್, ಆತನಿಗೆ ಇನ್ನೋರ್ವ ಆರೋಪಿಯ ಮೂತ್ರ ಕುಡಿಸಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.