ಅಯೋಧ್ಯೆ : ಧ್ವಂಸಗೊಳಿಸಲಾದ ಬಾಬರಿ ಮಸೀದಿಯಿದ್ದ ಸ್ಥಳದಿಂದ 20 ಕಿ.ಮೀ. ದೂರದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಮಸೀದಿಗೆ ಗಣರಾಜ್ಯೋತ್ಸವ ದಿನ ಜ.26ರಂದು ಶಿಲಾನ್ಯಾಸ ನಡೆಯಲಿದೆ ಎಂದು ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ದಿನ್ನಿಪುರ್ ನಲ್ಲಿ ನೀಡಲಾದ ಜಮೀನಿನಲ್ಲಿ ಅಂದು ಶಿಲಾನ್ಯಾಸ ನಡೆಯಲಿದೆ.
ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಟ್ ‘ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಸ್ಥಾಪಿಸಿದ್ದು, ಅದರ ಶಿಫಾರಸ್ಸಿನಂತೆ ಮಸೀದಿ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.
“70 ವರ್ಷಗಳ ಹಿಂದೆ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನವನ್ನೇ ನಾವು ಮಸೀದಿಯ ಶಿಲಾನ್ಯಾಸ ಮಾಡಲಿ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಸಂವಿಧಾನವು ಬಹುತ್ವವನ್ನು ಸಾರುತ್ತದೆ. ಹಾಗೆಯೇ ನಮ್ಮ ಮಸೀದಿ ನಿರ್ಮಾಣವು ಅದೇ ಉದ್ದೇಶವನ್ನು ಹೊಂದಿದೆ” ಎಂದು ಫೌಂಡೇಶನ್ ನ ಕಾರ್ಯದರ್ಶಿ ಅತರ್ ಹುಸೈನ್ ಹೇಳಿದ್ದಾರೆ.
ಮಸೀದಿಯ ನೀಲಿ ನಕಾಶೆ ಡಿ.19ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಮಸೀದಿ ಆವರಣದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಗ್ರಂಥಾಲಯ, ಕಮ್ಯುನಿಟಿ ಕಿಚನ್ ಮುಂತಾದ ಯೋಜನೆಗಳ ವಿನ್ಯಾಸ ರೂಪುಗೊಳ್ಳಲಿದೆ. ಮಸೀದಿಯು ವೃತ್ತಾಕಾರದಲ್ಲಿರಲಿದ್ದು, 2,000 ಮಂದಿಗೆ ಏಕ ಕಾಲದಲ್ಲಿ ನಮಾಝ್ ಗೆ ಅವಕಾಶವಿರಲಿದೆ ಎಂದು ಮಸೀದಿಯ ಮುಖ್ಯ ವಿನ್ಯಾಸಕಾರ ಪ್ರೊ. ಅಖ್ತರ್ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.