ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿರಂಕುಶ ಆಡಳಿತ: ಮಮತಾ ಬ್ಯಾನರ್ಜಿ ಎಚ್ಚರಿಕೆ

Prasthutha|

ಕೋಲ್ಕತ್ತಾ: ಒಂದು ವೇಳೆ ಸತತ ಮೂರನೇ ಬಾರಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದರೆ ದೇಶವು ನಿರಂಕುಶ ಅಧಿಕಾರವನ್ನು ಎದುರಿಸಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದರು.

- Advertisement -

ಟಿಎಂಸಿ ಯುವ ಘಟಕದ ರ್ಯಾಲಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ನಿರಂಕುಶಾಧಿಕಾರ ಬರಲಿದೆ. ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯನ್ನು ಬಿಜೆಪಿಯು ಡಿಸೆಂಬರ್ ಅಥವಾ ಮುಂದಿನ ಜನವರಿ ತಿಂಗಳಲ್ಲಿ ನಡೆಸಬಹುದು ಎಂಬ ಆತಂಕವಿದೆ ಎಂದರು.

“ಕೇಸರಿ ಪಕ್ಷವು ಅದಾಗಲೇ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ಕೆಲಸ ಮಾಡುತ್ತಿದೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು ದ್ವೇಷದಿಂದ ತುಂಬಿಸುತ್ತಾರೆ” ಎಂದು ಪ.ಬಂಗಾಳ ಸಿಎಂ ಹೇಳಿದರು.

- Advertisement -

ಲೋಕಸಭೆ ಚುನಾವಣೆಯನ್ನು ಅವಧಿಗೆ ಮುನ್ನವೇ ಮಾಡಲು ಬಿಜೆಪಿ ಮುಂದಾಗಿದೆ ಎಂದ ಅವರು, ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ಎಲ್ಲಾ ಹೆಲಿಕಾಪ್ಟರ್ ಗಳನ್ನು ಮುಂಗಡ ಕಾಯ್ದಿರಿಸಿಕೊಂಡಿದೆ ಎಂದರು.

“ಬಿಜೆಪಿಯು ಅದಾಗಲೇ ಎಲ್ಲಾ ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿಕೊಂಡಿದೆ. ಇತರ ಪಕ್ಷಗಳು ಕ್ಯಾನ್ವಾಸ್ ನಡೆಸಲು ಅವುಗಳನ್ನು ಬಳಸಬಾರದು ಎಂದು ಬಿಜೆಪಿ ಈ ರೀತಿ ಮಾಡಿದೆ” ಎಂದು ಆರೋಪಿಸಿದರು.

ಪ.ಬಂಗಾಳದ ಉತ್ತರ ಪರಗಣ 24ರಲ್ಲಿ ರವಿವಾರ ಬೆಳಗ್ಗೆ ನಡೆದ ಪಠಾಕಿ ಕಾರ್ಖಾನೆ ದುರಂತ ಘಟನೆಯ ಬಗ್ಗೆ ಮಾತನಾಡಿದ ಅವರು, “ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ಲದೆ ಕೆಲವು ಪೊಲೀಸರು ಅವರಿಗೆ ಸಹಾಯ ಮಾಡುತ್ತಿದ್ದಾರೆ” ಎಂದರು.

“ಹೆಚ್ಚಿನ ಪೊಲೀಸರು ಅವರ ಕರ್ತವ್ಯವನ್ನು ಶ್ರದ್ಧೆಯಿಂದ ನಡೆಸುತ್ತಿದ್ದಾರೆ. ಆದರೆ ಕೆಲವು ಮಂದಿ ಇಂತಹ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಆ್ಯಂಟಿ ರ್ಯಾಗಿಂಗ್ ಸೆಲ್‌ ನಂತೆಯೇ ನಮ್ಮಲ್ಲೂ ಬಂಗಾಳದಲ್ಲಿ ಭ್ರಷ್ಟಾಚಾರ ನಿಗ್ರಹ ಸೆಲ್ ಇದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು” ಎಂದರು

Join Whatsapp