ನವದೆಹಲಿ: ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದರಿಂದ ದೇಶದಲ್ಲಿ ಆತಂಕಕಾರಿ ವಾತಾವರಣವಿದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
2.8 ಕಿ.ಮೀ ರಸ್ತೆಯನ್ನು ಉದ್ಘಾಟನೆಗೈದು ಮತ್ತು ‘ಭಾರತ್ ಜೋಡೋ ಸೇತು’ ಎಂದು ಮರುನಾಮಕರಣದ ಬಳಿಕ ಮಾತನಾಡಿದ ಗೆಹ್ಲೋಟ್, ಈ ಹೆಸರು ದೇಶಾದ್ಯಂತ ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಎಂದು ತಿಳಿಸಿದರು.
ಅಂಬೇಡ್ಕರ್ ವೃತ್ತದ ಬಳಿ ಇರುವ ಎಲ್.ಐ.ಸಿ ಕಟ್ಟಡದಿಂದ ಅಜ್ಮೀರ್ ರಸ್ತೆಗೆ ಕಲ್ಪಿಸುವ ರಸ್ತೆಯನ್ನು ಈ ಹಿಂದೆ ಸೋದಲ ಎಲಿವೇಟೆಡ್ ರಸ್ತೆ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ 15ರಂದು ಉದ್ಘಾಟನೆಯಾಗಬೇಕಾಗಿದ್ದು, ಕಾರಣಾಂತರಗಳಿಂದ ವಿಳಂಬವಾಗಿತ್ತು.
ಭಾರತ ಜೋಡೋ ಯಾತ್ರೆಯು ಶಾಂತಿ ಮತ್ತು ಏಕತೆಯ ಸಂದೇಶವನ್ನು ನೀಡುತ್ತಿದೆ. ದೇಶದಲ್ಲಿ ಆತಂಕದ ವಾತಾವರಣವಿದ್ದು, ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಮತ್ತು ಕೋಮು ಸೌಹಾರ್ದತೆ ಕದಡಿದೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ಭಾರತ್ ಜೋಡೋ ಸೇತು ಎಂದು ಕರೆಯುವುದು ದೇಶಕ್ಕೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
250 ಕೋಟಿ ರೂ. ವೆಚ್ಚದಲ್ಲಿ ಭಾರತ್ ಜೋಡೋ ಸೇತು ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.