ಅಸ್ಸಾಂ: ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ತುರುಚಿದ ಆರೋಪ ಎದುರಿಸುತ್ತಿರುವ ಅಸ್ಸಾಮ್ ನ ಮಾಜಿ ಎನ್ ಆರ್ ಸಿ ಸಂಯೋಜಕ ಪ್ರತೀಕ್ ಹಜೆಲಾ ವಿರುದ್ಧ ದೇಶದ್ರೋಹದ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿದ್ದು, ಎನ್ ಆರ್ ಸಿ ನವೀಕರಣ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇತರ ಕೆಲವು ಅಧಿಕಾರಿಗಳ ಮೇಲೂ ಎಫ್ ಐಆರ್ ದಾಖಲಾಗಿವೆ ಎಂದು ತಿಳಿದು ಬಂದಿವೆ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪ್ರಾಧಿಕಾರವು ಈ ಎಫ್ ಐಆರ್ ದಾಖಲಿಸಿದೆ.
ಹಜೇಲಾ ಮತ್ತು ಇತರರ ಮೇಲೆ ಕ್ರಿಮಿನಲ್ ಮತ್ತು ದೇಶವಿರೋಧಿ ಚಟುವಟಿಕೆಗಳನ್ನು ಆರೋಪಿಸಿದ ಪ್ರಸ್ತುತ ಎನ್ ಆರ್ ಸಿ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಅವರು ರಾಜ್ಯದ ಸಿಐಡಿ ಇಲಾಖೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎನ್ ಆರ್ ಸಿ ಪ್ರಾಧಿಕಾರವು ರಾಜ್ಯದ ಮೂರು ಸ್ಥಳಗಳಲ್ಲಿ ಕೆಲವು ಮಾದರಿ ಸಮೀಕ್ಷೆಗಳನ್ನು ನಡೆಸಿದ್ದು, ಎನ್ ಆರ್ ಸಿ ಪಟ್ಟಿಯಲ್ಲಿ ದೊಡ್ಡ ಮಟ್ಟದ ತಿರುಚುವಿಕೆ ನಡೆದಿರುವುದು ಪತ್ತೆಯಾಗಿದೆ ಎಂದಿದ್ದಾರೆ.
ಗುಣಮಟ್ಟ ತಪಾಸಣೆಗಳನ್ನು ತಪ್ಪಿಸಲು ಸಾಫ್ಟ್ ವೇರ್ ಅನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ದೇವ್ ಶರ್ಮಾ ಆರೋಪಿಸಿದ್ದಾರೆ. ಹಜೇಲಾ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಇದನ್ನು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ದೇಶವಿರೋಧಿ ಕೃತ್ಯವೆಂದು ಹೇಳಿದ್ದಾರೆ.
ಈ ದೂರಿನನ್ವಯ NRC ಆಯೋಜಕ ಹಜೆಲಾ ಅವರೇ ದೇಶದ್ರೋಹದ ಪ್ರಕರಣವನ್ನು ಎದುರಿಸಬೇಕಾಗಿ ಬಂದಿದೆ.