ಕರ್ತವ್ಯ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ಬಗ್ಗೆ ತನಿಖೆ ನಡೆಸುವಂತೆ ಸೂಚನೆ

Prasthutha|

ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮುಖ್ಯಸ್ಥ  ಪ್ರವೀಣ್ ಸೂದ್ ಅವರಿಗೆ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

- Advertisement -

ಭಾನುವಾರ ಗೋ ರಕ್ಷಕ ಸಂಸ್ಥೆಯ (ಗೋ ಗ್ಯಾನ್ ಫೌಂಡೇಶನ್)  ಸ್ವಯಂಸೇವಕರು ಚನ್ನಪಟ್ಟಣದ ಹೊರ ವಲಯದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಸಾಯಿಖಾನೆ ಬಗ್ಗೆ ಪೊಲೀಸರ ಗಮನಕ್ಕೆ ತಂದು ದೂರು ಸಲ್ಲಿಸಿ, ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದರು.

ಆದರೆ, ಕಸಾಯಿಖಾನೆ ನಡೆಸುತ್ತಿದ್ದವರು, ಗೋ ರಕ್ಷಕ ದಳದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ದೂರುಗಳು ಬಂದಿರುವುದು ಕಳವಳಕಾರಿ ವಿಷಯ ಎಂದಿದ್ದಾರೆ.

- Advertisement -

ಕಸಾಯಿಖಾನೆ ಸ್ಥಳದಲ್ಲಿ ಟನ್ ಗಟ್ಟಲೆ, ಜಾನುವಾರುಗಳ ಚರ್ಮ ದಾಸ್ತಾನು ಸಹ ಮಾಡಲಾಗಿದ್ದು, ಗೋಡೌನ್ ಅನ್ನು ಸೀಜ್ ಮಾಡಲು ಪೊಲೀಸರು ವಿಫಲವಾಗಿದ್ದರ ಕುರಿತೂ ವರದಿ ನೀಡುವಂತೆ ಸಚಿವರು ತಿಳಿಸಿದ್ದಾರೆ. ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ಬಗ್ಗೆಯೂ ತನಿಖೆ ನಡೆಸುವಂತೆ, ಸಚಿವರು ಕೋರಿದ್ದಾರೆ.

Join Whatsapp