ಚೀನಾ: ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟ ಮುಂದೂಡಿಕೆ

Prasthutha|

- Advertisement -

ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಚೀನಾದ ಹ್ಯಾಂಗ್ ಝಾದಲ್ಲಿ ನಿಗದಿಯಾಗಿದ್ದ 2022 ಏಷ್ಯನ್ ಗೇಮ್ಸ್ ನ್ನು ಕ್ರೀಡಾಕೂಟವನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಗಿದೆ.


ಶಾಂಘೈನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವರ್ಷ ಮಾರ್ಚ್‌ನಿಂದ ಶಾಂಘೈನಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಸೇರಿದಂತೆ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. 19ನೇ ಏಷ್ಯನ್‌ ಗೇಮ್ಸ್‌, ಶಾಂಘೈನಿಂದ 175 ಕಿ.ಮೀ ದೂರದಲ್ಲಿರುವ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿಯಲ್ಲಿ ಸೆಪ್ಟೆಂಬರ್ 10 ರಿಂದ 25ರವರೆಗೂ ನಿಗದಿಯಾಗಿತ್ತು. ಆದರೆ ಇದೀಗ ಒಲಂಪಿಕ್ ನಂತರದ ಏರಡನೇ ಅತ್ಯಂತ ದೊಡ್ಡ ಕ್ರೀಡಾಕೂಟವನ್ನು ಮುಂದೂಡಿರುವುದಾಗಿ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

- Advertisement -


2023ರವರೆಗೂ ಕ್ರೀಡಾಕೂಟವನ್ನು ಮುಂದೂಡಲಾಗಿದ್ದು, ಆ ಬಳಿಕ ಕ್ರೀಡಾಕೂಟ ನಡೆಯುವ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ ವರದಿಯಾಗಿದೆ.

ಸುಮಾರು 1.2 ಕೋಟಿ ಜನಸಂಖ್ಯೆಯ ಹ್ಯಾಂಗ್‌ಜೌನಲ್ಲಿ ಏಷ್ಯನ್‌ ಗೇಮ್ಸ್‌ ಮತ್ತು ಏಷ್ಯನ್‌ ಪಾರಾ ಗೇಮ್ಸ್‌ ಸ್ಪರ್ಧೆಗಳಿಗಾಗಿ ಈಗಾಗಲೇ 56 ಸ್ಥಳಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ವರ್ಷದ ಆರಂಭದಲ್ಲಿ ಬೀಜಿಂಗ್ ವಿಂಟರ್ ಒಲಿಂಪಿಕ್ಸ್‌ನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದ ಜೈವಿಕ-ಬಬಲ್‌ ನಿಯಮವನ್ನು ಏಷ್ಯನ್ ಗೇಮ್ಸ್‌ ನಲ್ಲೂ ಮುಂದುವರಿಸಲು ಸಂಘಟಕರು ಪೂರ್ವ ತಯಾರಿ ಮಾಡಿಕೊಂಡಿದ್ದರು. ಆದರೆ ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ ಸಂಘಟನೆಯ ಸದಸ್ಯರೊಂದಿಗೆ ಹಲವು ಸುತ್ತಿನ ಮಾತುಕತೆಯ ಬಳಿಕ ಕೂಟವನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.


ಒಲಿಂಪಿಕ್‌ ಅರ್ಹತಾ ಸುತ್ತಿನ ಎಲ್ಲಾ ಕೂಟಗಳು ಮುಂದಿನ ವರ್ಷ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಏಷ್ಯನ್ ಗೇಮ್ಸ್ ನ್ನು ಕ್ರೀಡಾಕೂಟ ಅಯೋಜನೆಗೆ ಸಮಯ ನಿಗದಿ ಪಡಿಸುವುದು ಆಯೋಜಕರಿಗೆ ಸವಾಲಾಗಲಿದೆ. ಈ ಹಿಂದೆ ಚೀನಾದ ಬೀಜಿಂಗ್‌ (1999) ಮತ್ತು ಗಾಂಗ್‌ಜೌನಲ್ಲಿ (2010) ಏಷ್ಯಾ ಗೇಮ್ಸ್‌ ಕ್ರೀಡಾಕೂಟ ನಡೆಸಲಾಗಿತ್ತು.

Join Whatsapp