ಬಾಲ್ಯ ವಿವಾಹ ತಡೆ ಹೆಸರಿನಲ್ಲಿ ಅತಿರೇಕದ ಕ್ರಮ: ಅಸ್ಸಾಂ ಸರಕಾರದ ವಿರುದ್ಧ ಅಸದುದ್ದೀನ್ ಉವೈಸಿ ಕಿಡಿ

Prasthutha|

ನವದೆಹಲಿ: ಅಸ್ಸಾಂ ಸರಕಾರವು ಬಾಲ್ಯ ವಿವಾಹದ ವಿರುದ್ಧ ಕ್ರಮ ತೆಗೆದುಕೊಳ್ಳುವ ಹೆಸರಿನಲ್ಲಿ ಅತಿರೇಕವೆಸಗುತ್ತಿದೆ ಎಂದು ಎಐಎಂಐಎಂ- ಅಖಿಲ ಭಾರತ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಕಿಡಿಕಾರಿದ್ದಾರೆ.

- Advertisement -


ಈ ಸಂಬಂಧ ಆದ ನೂರಾರು ಬಂಧನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಸದುದ್ದೀನ್ ಅವರು ಸರಕಾರದ ಈ ಕ್ರಮದ ಹಿಂದೆ ದುರುದ್ದೇಶಪೂರಿತ ಗುರಿ ಇರುವುದಾಗಿ ಹೇಳಿದರು.
ಸರಕಾರದ ಅಧಿಕಾರಿಗಳ ಅಧಿಕೃತ ಮಾಹಿತಿಯಂತೆ ಶನಿವಾರದವರೆಗೆ ಅಸ್ಸಾಂನಲ್ಲಿ ಬಾಲ್ಯ ವಿವಾಹ ಹೆಸರಿನಲ್ಲಿ 2,250 ಜನರನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹ, ಎಳವೆಯಲ್ಲಿ ಗರ್ಭ, ಹೆರಿಗೆ ಸಾವು ಇವೆಲ್ಲದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಸರಕಾರ ಹೇಳುತ್ತಿದೆ.


ಅಸ್ಸಾಮಿನಲ್ಲಿ 31.8% ಹೆಣ್ಣು ಮಕ್ಕಳು ಮೈನರ್ ಎಂದರೆ 18 ಪ್ರಾಯ ತುಂಬುವುದರೊಳಗೆ ಮದುವೆಯಾಗುತ್ತಾರೆ. ಉಳಿದವರು 20- 24ರ ಪ್ರಾಯದಲ್ಲಿ ಮದುವೆಯಾಗುವವರು. ರಾಷ್ಟ್ರೀಯ ಬಾಲ್ಯ ವಿವಾಹ ಸರಾಸರಿ 23.3%ಕ್ಕಿಂತ ಇದು ಹೆಚ್ಚು ಎಂದು ಅಂದಾಜಿಸಲಾಗಿದೆ.
ಅಸ್ಸಾಂನಲ್ಲಿ ಈ 31.8 ಶೇಕಡಾ ಬಾಲಕಿಯರ ವಿವಾಹದಲ್ಲಿ ಅರ್ಧಕ್ಕಿಂತ ಹೆಚ್ಚು 50.8% ಎಐಯುಡಿಎಫ್- ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗದ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ಪ್ರತಿನಿಧಿಸುವ ದುಬ್ರಿ ಕ್ಷೇತ್ರದಲ್ಲಿ ನಡೆದಿದೆ ಎಂದು ಸರ್ಕಾರ ಹೇಳಿದೆ.

- Advertisement -


ಬಾಲ್ಯ ವಿವಾಹವಾಗುವವರು ಎಳವೆಯಲ್ಲೇ ಬಸಿರಾಗಿ, ಹೆರಿಗೆ ಸಂದರ್ಭದ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಸರಕಾರ ಹೇಳಿದೆ.
ಅಸದುದ್ದೀನ್ ಅವರು ಬಿಜೆಪಿ ಸರಕಾರವನ್ನು ಟೀಕಿಸುತ್ತ, ಕೆಳ ಅಸ್ಸಾಂನಲ್ಲಿ ಸರ್ಕಾರ ಭೂಹೀನರಿಗೆ ನೆಲ ನೀಡುತ್ತಿಲ್ಲ ಎಂದು ದೂರಿದರು.
“ಬಿಜೆಪಿ ಸರಕಾರವು ಮುಸ್ಲಿಮರನ್ನು ತಾರತಮ್ಯದಿಂದ ನೋಡುತ್ತಿದೆ. ಮೇಲು ಅಸ್ಸಾಮದಲ್ಲಿ ಅವರು ಭೂಹೀನರಿಗೆ ನೆಲ ನೀಡಿದ್ದಾರೆ. ಆದರೆ ಕೆಳ ಅಸ್ಸಾಂನಲ್ಲಿ ಮುಸ್ಲಿಮರು ಹೆಚ್ಚು ಎನ್ನುವ ಕಾರಣಕ್ಕೆ ಭೂಹೀನರಿಗೆ ಜಮೀನು ನೀಡುತ್ತಿಲ್ಲ” ಎಂದು ಅಸದುದ್ದೀನ್ ಟೀಕಿಸಿದರು.


ಸತತ ಎರಡನೆಯ ದಿನವೂ ಕಲಾಪ ನಡೆಯದೆ ಸಂಸತ್ತು ಮುಂದೂಡಲ್ಪಟ್ಟುದನ್ನೂ ಅಸಾದುದ್ದೀನ್ ಅವರು ಖಂಡಿಸಿದರು.
ಪೊಲೀಸರ ಮಾಹಿತಿಯಂತೆ ಬಾಲ್ಯ ವಿವಾಹದ ವಿರುದ್ಧದ ಕಾರ್ಯಾಚರಣೆಯಲ್ಲಿ ಬಿಸ್ವನಾತ್’ನಲ್ಲಿ 139, ದುಬ್ರಿಯಲ್ಲಿ 126, ಬಕ್ಸಾದಲ್ಲಿ 120, ಬಾರ್ಪೇಟದಲ್ಲಿ 114, ನಾಗೋನ್’ನಲ್ಲಿ 97, ಹೋಜಾಯ್’ನಲ್ಲಿ 96, ಕೋಕ್ರಾಜಾರ್’ನಲ್ಲಿ 94, ಬೊಂಗೈಗಾಂವ್’ನಲ್ಲಿ 87, ಕರೀಂ ಗಂಜ್’ನಲ್ಲಿ 79, ಹೈಲಕಂಡಿಯಲ್ಲಿ 76, ಕಚಾರ್’ನಲ್ಲಿ 72, ಗೋಲ್ಪಾರಾ ಜಿಲ್ಲೆಯಲ್ಲಿ 72 ಜನರನ್ನು ಬಂಧಿಸಲಾಗಿದೆ.
ಪತ್ರಿಕಾಗೋಷ್ಠಿ ನಡೆಸಿದ ಅಸ್ಸಾಂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಜಿ. ಪಿ. ಸಿಂಗ್ ಅವರು, ಬಾಲ್ಯ ವಿವಾಹ ಸಂಬಂಧ ನಾನಾ ಪೊಲೀಸ್ ಠಾಣೆಗಳಲ್ಲಿ 4,074 ಮೊಕದ್ದಮೆಗಳು ದಾಖಲಾಗಿರುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಬಾಲ್ಯ ವಿವಾಹದ ವಿರುದ್ಧದ ಕಾರ್ಯಾಚರಣೆಯನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.