ಮೂರನೆಯ ಬಾರಿಯೂ ದಿಲ್ಲಿ ಮೇಯರ್ ಆಯ್ಕೆ ನಡೆಯದೆ ಎಂಸಿಡಿ ಸಭೆ ಮುಂದೂಡಿಕೆ

Prasthutha|

ನವದೆಹಲಿ: ದೆಹಲಿ ಮೇಯರ್ ಆಯ್ಕೆಗೆ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್- ಎಂಸಿಡಿ ತಿಂಗಳಲ್ಲಿ ಮೂರನೆಯ ಸೋಮವಾರ ಸೇರಿತ್ತಾದರೂ ಮತ್ತೆ ಮೇಯರ್ ಆಯ್ಕೆ ನಡೆಸದೆ ಮುಂದೂಡಲಾಯಿತು.

- Advertisement -


ಮೇಯರ್ ಚುನಾವಣೆಯಲ್ಲಿ ನಾಮಕರಣಗೊಂಡ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇದೆ ಎಂಬ ಹೇಳಿಕೆಯು ಸದ್ದು ಗದ್ದಲಕ್ಕೆ ಕಾರಣವಾಗಿ ಮೇಯರ್ ಆಯ್ಕೆ ನಡೆಯದೆಯೇ ಎಂಸಿಡಿ ಸಭೆ ಮುಂದೂಡಲ್ಪಟ್ಟಿತು. ಮುಂದಿನ ದಿನಾಂಕ ಪ್ರಕಟಿಸುವವರೆಗೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಬಿಜೆಪಿಯ ಕೌನ್ಸಿಲರ್ ಸತ್ಯ ಶರ್ಮಾ ಹೇಳಿದರು.
ಎಎಪಿ ಕೌನ್ಸಿಲರ್’ಗಳು ಸ್ಥಳ ಬಿಡಲು ನಿರಾಕರಿಸಿ ಅಲ್ಲೇ ಕುಳಿತಿರುವಂತೆಯೇ ಬಿಜೆಪಿ ಕೌನ್ಸಿಲರ್’ಗಳು ಮತ್ತು ನಾಯಕರು ಹೊರಕ್ಕೆ ಎದ್ದು ಹೋದರು.
ಸೋಮವಾರ ಮೇಯರ್ ಆಯ್ಕೆಗೆ ಸೇರುತ್ತಿದ್ದಂತೆಯೇ ಚುನಾವಣಾ ಅಧಿಕಾರಿ ಸತ್ಯ ಶರ್ಮಾ ಅವರು, 1957ರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಕಾಯ್ದೆಯಂತೆ ಹಿರಿಯ ಅಧಿಕಾರಿಗಳಿಗೂ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ ಎಂದರು. ಸದರಿ ಕಾಯ್ದೆಯಂತೆ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳನ್ನು ಗಮನಿಸಲು ಲೆಫ್ಟಿನೆಂಟ್ ಗವರ್ನರ್ ಅವರು 25 ವಯಸ್ಸು ಮೀರಿದ 10 ಜನರನ್ನು ನೇಮಕ ಮಾಡಬಹುದು ಎಂದರು.


ಆದರೆ ಎಎಪಿ ಇದು ಬಿಜೆಪಿಯವರ ಮೋಸದ ತಂತ್ರ ಎಂದರು.
ಜನವರಿ 6 ಮತ್ತು ಜನವರಿ 24ರಂದು ಮೇಯರ್ ಆಯ್ಕೆಗೆಂದು ಎಂಸಿಡಿ ಸಭೆ ಸೇರಿದಾಗ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್’ಗಳ ವಾದಗಳ ಗದ್ದಲ ಗೊಂದಲಕ್ಕೆ ಈಡಾದುದರಿಂದ ಸಭೆಯನ್ನು ಮುಂದೂಡಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಮೇಯರ್ ಚುನಾವಣೆ ನಡೆಯಲೇ ಬೇಕು ಎಂದು ಎಎಪಿ ಬಿಜೆಪಿ ಎರಡೂ ಪಟ್ಟು ಹಿಡಿದು ಸೇರಿದ್ದವು.
2022ರ ಡಿಸೆಂಬರ್ 4ರಂದು ದಿಲ್ಲಿ ಮುನಿಸಿಪಲ್ ಫಲಿತಾಂಶ ಬಂದಿದ್ದು, ಅದರಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಎಎಪಿ ಪಕ್ಷವು ಸೋಲಿಸಿತ್ತು. ದಿಲ್ಲಿ ಸರಕಾರ ಹೊಂದಿರುವ ಆಮ್ ಆದ್ಮಿ ಪಕ್ಷವು ಈ ಮೂಲಕ ಎಂಸಿಡಿಯಲ್ಲಿ ಮೊದಲ ಬಾರಿಗೆ ಬಹುಮತ ಸಾಧಿಸಿತ್ತು.

- Advertisement -


250 ಸದಸ್ಯರ ಎಂಸಿಡಿಗೆ ಎಎಪಿ 134 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ 104ರಲ್ಲಿ ಮಾತ್ರ ಗೆಲುವು ಕಂಡಿತ್ತು. ಉಳಿದ ಸ್ಥಾನ ದೂರದ ಮೂರನೆಯ ಸ್ಥಾನಿ ಕಾಂಗ್ರೆಸ್ಸಿಗೆ ಲಭಿಸಿತ್ತು.

Join Whatsapp