ಜಾಮಿಯಾ ಹಿಂಸಾಚಾರದಲ್ಲಿ ಶಾರ್ಜಿಲ್ ಮೊದಲಾದವರನ್ನು ಹರಕೆಯ ಕುರಿ ಮಾಡಲಾಗಿದೆ: ದಿಲ್ಲಿ ಕೋರ್ಟ್ ಕಿಡಿ

Prasthutha|

ಭಿನ್ನಾಭಿಪ್ರಾಯಗಳನ್ನು ಪ್ರೋತ್ಸಾಹಿಸಬೇಕೇ ಹೊರತು ಅದರ ಉಸಿರುಗಟ್ಟಿಸಬಾರದು

- Advertisement -


ನವದೆಹಲಿ: 2019ರ ಡಿಸೆಂಬರ್ ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಆರೋಪಿಗಳು ಎನ್ನಲಾಗಿದ್ದ ಶಾರ್ಜಿಲ್ ಇಮಾಮ್, ಸಫೂರಾ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತಿತರ ಎಂಟು ಜನರನ್ನು ದಿಲ್ಲಿ ಕೋರ್ಟ್ ಬಿಡುಗಡೆ ಮಾಡಿದ್ದು, ಇವರನ್ನು ಕೇವಲ ಬಲಿಪಶು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.


ಹೆಚ್ಚುವರಿ ಸೆಷನ್ಸ್ ಜಡ್ಜ್ ಅರುಳ್ ವರ್ಮಾ ಅವರು, ಭಿನ್ನಾಭಿಪ್ರಾಯವನ್ನು ಪ್ರೋತ್ಸಾಹಿಸಬೇಕೇ ಹೊರತು ಅದರ ಉಸಿರುಗಟ್ಟಿಸಬಾರದು ಎಂದು ಹೇಳಿದರು.
ಅದೇ ವೇಳೆ ದಿಲ್ಲಿ ಪೊಲೀಸರನ್ನು ನೇರವಾಗಿ ಟೀಕಿಸಿದ ಕೋರ್ಟ್, ಯಾವುದೇ ಆಧಾರವಿಲ್ಲದೆ ಯಾರನ್ನೋ ಬಲಿಪಶು ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಅಂದು ಅಲ್ಲಿ ಗುಂಪು ಗಲಭೆ ಆಗಿತ್ತು. ನಿಜವಾದ ಅಪರಾಧಿಗಳನ್ನು ಹಿಡಿಯಲಾಗದೆ ಪೊಲೀಸರು ಇಮಾಮ್, ತನ್ಹಾ, ಝರ್ಗರ್ ಮೊದಲಾದವರನ್ನು ಸಿಕ್ಕಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದನ್ನೂ ಕೋರ್ಟ್ ಪ್ರಶ್ನಿಸಿತು.
“ಚಾರ್ಜ್ ಶೀಟ್ ನಲ್ಲಿ ಹೇಳಿದ ಯಾವುದೇ ವಿಷಯವೂ ಆರೋಪಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಇದನ್ನೆಲ್ಲ ಪರಿಶೀಲಿಸಿದ ಕೋರ್ಟು ಯಾವ ತೀರ್ಮಾನಕ್ಕೆ ಬಂದಿದೆಯೆಂದರೆ ನಿಜವಾದ ಅಪರಾಧಿಗಳನ್ನು ಹಿಡಿಯಲಾಗದ ಪೊಲೀಸರು ಯಾರನ್ನೋ ಎಳೆದು ತಂದು ಹರಕೆಯ ಕುರಿ ಮಾಡಿದ್ದಾರೆ ಎಂಬುದು ಖಚಿತವಾಗಿದೆ” ಎಂದು ನ್ಯಾಯಾಧೀಶರು ಹೇಳಿದರು.

- Advertisement -


ಇದು 2019ರ ಡಿಸೆಂಬರ್ ನಲ್ಲಿ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರದೇಶದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಪ್ರತಿಭಟನಕಾರರು ಸಿಎಎ- ಪೌರತ್ವ ತಿದ್ದುಪಡಿ ಮಸೂದೆ, ಎನ್ ಆರ್ ಸಿ- ನಾಗರಿಕರ ರಾಷ್ಟ್ರೀಯ ನಮೂದಿಸುವಿಕೆ ಕಡತದ ವಿರುದ್ಧ ಪ್ರತಿಭಟನೆ ಮಾಡುತ್ತ ಸಂಸತ್ ಭವನದತ್ತ ಹೊರಟಿದ್ದರು. ಪ್ರತಿಭಟನೆಯ ನಡುವೆ ಗಲಭೆ ಆರಂಭವಾಗಿದೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪ್ರತಿಭಟನೆಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದೊಳಕ್ಕೆ ಹೋದರು.


ಈ ಪ್ರಕರಣಕ್ಕೆ ಪೊಲೀಸರು 12 ಜನರನ್ನು ಆರೋಪಿಗಳು ಎಂದು ಹೇಳಿದ್ದಾರೆ. ಗಲಭೆ, ಕಾನೂನು ಬಾಹಿರವಾಗಿ ಗುಂಪು ಸೇರುವಿಕೆ ಮೊದಲಾದ ಭಾರತೀಯ ದಂಡ ಸಂಹಿತೆಯ ಅಡಿ ಅವರ ಮೇಲೆ ಆರೋಪ ಹೊರಿಸಲಾಗಿದೆ.


ಸಮಗ್ರವಾಗಿ ಪ್ರಕರಣವನ್ನು ವಿಚಾರಿಸಿದ ಕೋರ್ಟ್ 11 ಮಂದಿಯನ್ನು ಬಿಡುಗಡೆ ಮಾಡಿತು ಹಾಗೂ ಮುಹಮದ್ ಇಲ್ಯಾಸ್ ಎಂಬ ಒಬ್ಬರ ಮೇಲೆ ಮಾತ್ರ ಆರೋಪ ಸರಿಯಿದೆ ಎಂದು ಹೇಳಿತು.
ಇಮಾಮ್, ತನ್ಹಾ, ಜರ್ಗರ್ ಅಲ್ಲದೆ ಬಿಡುಗಡೆ ಆದ ಇತರರೆಂದರೆ ಮುಹಮದ್ ಅಬೂಜರ್, ಉಮೈರ್ ಅಹ್ಮದ್, ಮುಹಮ್ಮದ್ ಶೋಯೆಬ್, ಮೆಹಮೂದ್ ಅನ್ವರ್, ಮುಹಮ್ಮದ್ ಕಾಸಿಂ, ಮುಹಮ್ಮದ್ ಬಿಲಾಲ್ ನದೀಂ, ಶಹಜರ್ ರಜಾ ಖಾನ್ ಮತ್ತು ಚಂದಾ ಯಾದವ್.


ಗುಂಪಿನಲ್ಲಿದ್ದರು ಎನ್ನುವುದಕ್ಕಾಗಿ ಪೊಲೀಸರು ಸುಲಭವಾಗಿ ಸಿಕ್ಕವರನ್ನು ಮರದಿಂದ ಬಿದ್ದ ಹಣ್ಣನ್ನು ಹೆಕ್ಕಿಕೊಳ್ಳುವಂತೆ ಪೋಲೀಸರು ಆರಿಸಿಕೊಂಡಿದ್ದೀರಿ, ಇದ್ಯಾವ ನ್ಯಾಯ ಎಂದೂ ಕೋರ್ಟು ಕೇಳಿತು.
“ಹೀಗೆ ಹೇಗೆಂದರೆ ಹಾಗಿ ಚಾರ್ಜ್ ಶೀಟಿಗೊಳಗಾದವರ ವಿಚಾರಣೆಯು ಬಹು ಕಾಲ ಎಳೆಯುವುದು ಇವೆಲ್ಲ ಈ ದೇಶದ ಕ್ರಿಮಿನಲ್ ನ್ಯಾಯ ಪದ್ಧತಿಗೆ ಶೋಭೆ ತರುವುದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಹಾಗಿರುವಾಗ ಪೋಲೀಸರ ನಡೆಯು ಜನ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡಿದೆ” ಎಂದು ಕೋರ್ಟ್ ಹೇಳಿತು.
ಅಭಿಪ್ರಾಯ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಗಳಲ್ಲಿ ಭಿನ್ನಾಭಿಪ್ರಾಯವು ಏಳುವುದು ಮೂಲಭೂತ ಹಕ್ಕುಗಳಲ್ಲೇ ಅಡಕವಾಗುತ್ತದೆ. ನಾವು ಜನ ಸ್ವಾತಂತ್ರ್ಯ ಎತ್ತಿ ಹಿಡಿಯುವ ಪ್ರಮಾಣ ವಚನದೊಂದಿಗೆ ನ್ಯಾಯಾಧೀಶರಾಗುತ್ತೇವೆ ಎಂದು ಜಸ್ಟಿಸ್ ಅರುಳ್ ವರ್ಮಾ ಹೇಳಿದರು.


“ಭಿನ್ನಾಭಿಪ್ರಾಯ ಪ್ರಕಟಿಸುವುದು ಮತ್ತು ದಂಗೆಯೇಳುವುದರ ನಡುವಣ ವ್ಯತ್ಯಾಸವನ್ನು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವವರು ತಿಳಿದಿರಬೇಕು. ದಂಗೆಕೋರನನ್ನು ಕಾನೂನಿನ ಕಕ್ಷೆಗೆ ಖಂಡಿತ ತರಬೇಕು. ಆದರೆ ಭಿನ್ನಾಭಿಪ್ರಾಯಗಳು ನಾಗರಿಕರ ಮನೋ ಭಾವನೆಯಾಗಿದ್ದು, ಅವುಗಳಿಗೆ ರಕ್ಷಣೆ ಕೊಡಬೇಕು” ಎಂದೂ ನ್ಯಾಯಾಧೀಶರು ಹೇಳಿದರು.