ಗುಜರಾತ್ ಹಿಂಸಾಚಾರ ಕುರಿತು ಅಮಿತ್ ಶಾ ಹೇಳಿಕೆ: ಅಸದುದ್ದೀನ್ ಉವೈಸಿ ಕಿಡಿ

Prasthutha|

ಅಹ್ಮದಾಬಾದ್: ಗುಜರಾತ್ 2002ರ ಹಿಂಸಾಕೋರರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂಬ ಗೃಹ ಮಂತ್ರಿ ಅಮಿತ್ ಶಾ ಹೇಳಿಕೆಗೆ ಎಐಎಂಐಎಂನ ಸಂಸದ ಅಸದುದ್ದೀನ್ ಉವೈಸಿ ಕಿಡಿಕಾರಿದ್ದಾರೆ.

- Advertisement -

 “ಯಾವಾಗಲೂ ಒಬ್ಬರ ಜೊತೆಯೇ ಎಲ್ಲವೂ ಇರುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಅಮಿತ್ ಶಾ ಯಾವ ಪಾಠದ ಬಗ್ಗೆ ಹೇಳುತ್ತಿದ್ದಾರೆ, ಅಪರಾಧಿಗಳನ್ನು ಮುಕ್ತವಾಗಿ ತಿರುಗಾಡಲು ಬಿಡುವುದನ್ನೇ ಎಂದು ಉವೈಸಿ ಕುಟುಕಿದ್ದಾರೆ.

- Advertisement -

ಗುಜರಾತಿನ ಅತಿ ಹೆಚ್ಚು ಮುಸ್ಲಿಂ ಜನ ವಸತಿ ಇರುವ ಜುಹಾಪುರದಲ್ಲಿ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತ ಮಾತನಾಡಿದರು.

“ಇಂದು ಜಾಥಾದಲ್ಲಿ ಮಾತನಾಡಿದ ಅಮಿತ್ ಶಾ ಅವರು, 2002ರ ಗಲಭೆಕೋರರಿಗೆ ಪಾಠ ಕಾದಿದೆ ಎಂದು ಹೇಳಿದ್ದಾರೆ. ಭಾರತೀಯ ಜನತಾ ಪಕ್ಷವು ಗುಜರಾತಿನಲ್ಲಿ ಕಾಯಂ ಶಾಂತಿ ತಂದಿದೆ ಎಂದು ಹೇಳಿದ್ದಾರೆ. ನಾನು ಅಹಮದಾಬಾದಿನ ಸಂಸದರೂ ಆದ ಅಮಿತ್ ಶಾರಿಗೆ ಹೇಳಬಯಸುತ್ತೇನೆ, ನೀವು 2002ರ ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಜೈಲಿನಿಂದ ಬಿಟ್ಟದ್ದು ಶಾಂತಿ ಸ್ಥಾಪನೆಯೇ? ಬಿಲ್ಕಿಸ್ ಬಾನುರವರ ಮಗುವನ್ನು ಕೊಂದವರನ್ನು ಬಿಡುಗಡೆ ಮಾಡಿದ ನಿಮಗೆ ಪಾಠ ಕಾದಿಲ್ಲವೆ? ನೀವು ನಮಗೆ ಎಹ್ಸಾನ್ ಜಾಫ್ರಿಯಂಥವರು ಕೊಲ್ಲಲ್ಪಡಬೇಕು ಎಂಬ ಪಾಠ ಮಾಡುತ್ತೀರಾ?” ಎಂದು ಉವೈಸಿ ಪ್ರಶ್ನಿಸಿದ್ದಾರೆ.

ಈ ಭಾಷಣದಲ್ಲಿ ಅವರು ಗುಲ್ಬರ್ಗ್ ಸೊಸೈಟಿ ಸಾಲು ಸಾಲು ಕೊಲೆಗಳನ್ನೂ ನೆನಪಿಸಿದರು, ಬೆಸ್ಟ್ ಬೇಕರಿಯನ್ನು ಸುಟ್ಟ, ಸಾವಿರಾರು ಜನರ ಜೀವ ತೆಗೆದ 2002ರ ಗಲಭೆಕೋರರು ಯಾರು ಎಂದೂ ಉವೈಸಿ ಪ್ರಶ್ನಿಸಿದರು. 

“ಅಮಿತ್ ಶಾ ಅವರೇ ನಿಮಗೆ ಯಾವ ಪಾಠ ತಿಳಿದಿದೆ? ಶಾಂತಿ ಸ್ಥಾಪನೆಯಾಗುವುದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಕ್ಕಾಗ ಮಾತ್ರ” ಎಂದು ಅವರು ಹೇಳಿದರು.

“ಅಧಿಕಾರವು ಯಾವಾಗಲೂ ಒಬ್ಬರ ಬಳಿಯೇ ಇರುವುದಿಲ್ಲ. ಒಂದು ದಿನ ಎಲ್ಲರಿಂದಲೂ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತದೆ.  ಅಧಿಕಾರದ ಅಮಲೇರಿಸಿಕೊಂಡಿರುವ ಗೃಹ ಮಂತ್ರಿಗಳು ನಿಮಗೆ ಪಾಠ ಕಲಿಸಲಾಗುವುದು ಎಂದು ಹೇಳುತ್ತಿದ್ದಾರೆ. ಇಡೀ ದೇಶದಲ್ಲಿ ಕುಖ್ಯಾತರಾಗಿರುವ ನೀವು ಯಾವ ಪಾಠ ಕಲಿಸುತ್ತೀರಿ? ದಿಲ್ಲಿಯಲ್ಲಿ ಅಷ್ಟು ಕೆಟ್ಟ ಕೋಮು ಗಲಭೆ ಆಯಿತಲ್ಲ, ನೀವು ಏನು ಪಾಠ ಕಲಿಸಿದಿರಿ?” ಎಂದು ಉವೈಸಿ ಪ್ರಶ್ನಿಸಿದರು.

2002ರ ಗಲಭೆಕೋರರಿಗೆ ಪಾಠ ಕಲಿಸಿದ್ದೇವೆ, 22 ವರ್ಷಗಳಿಂದ ಗುಜರಾತಿನಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂದು ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

“1995ಕ್ಕೆ ಮೊದಲು ಗುಜರಾತಿನಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಕೋಮು ಗಲಭೆ ಅತಿರೇಕಕ್ಕೆ ಹೋಗಿತ್ತು. ಕಾಂಗ್ರೆಸ್ಸಿನ ಕೆಲವರು ಪರಸ್ಪರ ಎತ್ತಿ ಕಟ್ಟಿ ಕಚ್ಚಾಡಿಸುತ್ತಿದ್ದರು. ಆ ಮೂಲಕ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಬೆಳೆಸಿಕೊಂಡು, ದೊಡ್ಡ ಸಮುದಾಯಕ್ಕೆ ಅನ್ಯಾಯ ಮಾಡಿತು” ಎಂದು ಅಮಿತ್ ಶಾ ಖೇಡ್ ಜಿಲ್ಲೆಯ ಮಹುದಾದಲ್ಲಿ ಭಾಷಣ ಮಾಡಿದ್ದರು. 

ಮಾತ್ರವಲ್ಲ ನಾವು ಶಾಂತಿ ಮರು ಸ್ಥಾಪಿಸಿದೆವು ಎಂದೂ ಹೇಳಿದ್ದರು!

ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಎಐಎಂಐಎಂ 14 ಅಭ್ಯರ್ಥಿಗಳನ್ನು ನಿಲ್ಲಿಸಿದೆ.

Join Whatsapp