ಅಬುಧಾಬಿ: ಯುಎಇಯಲ್ಲಿ ಕೋವಿಡ್ ಪ್ರಕರಣ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆ್ಯಪಲ್ ಇಂಕ್ ಸೋಮವಾರ ತನ್ನ ಎಲ್ಲಾ ಮಳಿಗೆಗಳನ್ನು ಜನವರಿ 13, ಗುರುವಾರದ ವರೆಗೆ ಮುಚ್ಚಲಿದೆ ಎಂದು ಮೂಲಗಳು ತಿಳಿಸಿವೆ.
ಐಫೋನ್ ತಯಾರಕರು ಪ್ರಸ್ತುತ ಯುಎಇಯಲ್ಲಿನ ದುಬೈ ಮಾಲ್, ಮಾಲ್ ಆಫ್ ಎಮಿರೇಟ್ಸ್ ಮತ್ತು ಯಾಸ್ ಮಾಲ್ ನಲ್ಲಿರುವ ಮೂರು ಔಟ್ ಲೆಟ್ ಗಳನ್ನು ಸ್ಥಗಿತಗೊಳಿಸಲಾಗುವುದೆಂದು ಆ್ಯಪಲ್ ಮಂಡಳಿ ಮಾಧ್ಯಮಗಳಿಗೆ ತಿಳಿಸಿವೆ.
ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮತೆಯ ಎಚ್ಚರಿಕೆಯ ಭಾಗವಾಗಿ ಆ್ಯಪಲ್ ಈ ನಿರ್ಧಾರ ತೆಗೆದುಕೊಂಡಿದೆ ಮತ್ತು ಆ್ಯಪಲ್ ತಂಡ ಆದಷ್ಟು ಬೇಗ ಗ್ರಾಹಕರ ಸೇವೆಗೈಯ್ಯಲು ಉತ್ಸುಕವಾಗಿದೆ ಎಂದು ಆ್ಯಪಲ್ ನ ವಕ್ತಾರ ಪ್ರತಿಕ್ರಿಯಿಸಿದ್ದಾರೆ.
ಜಾಗತಿಕವಾಗಿ ಆ್ಯಪಲ್ ಇತ್ತೀಚಿನ ದಿನಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಅನೇಕ ಮಳಿಗೆಗಳನ್ನು ಕೋವಿಡ್ ಮತ್ತು ರೂಪಾಂತರಿ ಓಮಿಕ್ರಾನ್ ಸೋಂಕಿನ ಭೀತಿಯಿಂದಾಗಿ ಮುಚ್ಚಿದೆ ಎಂದು ಹೇಳಲಾಗಿದೆ.