ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿರುವುದರ ವಿರುದ್ದ ದೇಶದಾದ್ಯಂತ ಹೋರಾಟಗಳು ನಡೆಯುತ್ತಿದೆ. ದೆಹಲಿಯ ಗಡಿಗಳಲ್ಲಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಬೇಡಿಕೆಗೆ ಮಣಿಯದೆ ಇರುವುದರಿಂದ ದೇಶವ್ಯಾಪಿ ಬಿಜೆಪಿ ವಿರೋಧಿ ಅಲೆಗಳು ಎದ್ದಿದೆ. ಬಿಜೆಪಿ ಭದ್ರಕೋಟೆ ಎಂದು ಕರೆಯಲಾಗುತ್ತಿರುವ ಉತ್ತರ ಪ್ರದೇಶ ಮತ್ತು ಹರಿಯಾಣಗಳ ಹಲವಾರು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ದ ನಡೆಯುತ್ತಿರುವ ರೈತರ ಮಹಾಪಂಚಾಯತ್‌ನಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದಾರೆ.
ರೈತ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಪಂಜಾಬ್ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇತ್ತೀಚೆಗೆ ಬಿಜೆಪಿ ದೂಳೀಪಟವಾಗಿದೆ.
ಇದೀಗ ಆಂಧ್ರಪ್ರದೇಶದಲ್ಲಿ ನಡೆದ ಮೂರನೇ ಹಂತದ ಪಂಚಾಯತ್ ಚುನಾವಣೆಯ ಮತ ಎಣಿಕೆ ಬುಧವಾರ ಕೊನೆಗೊಂಡಿದೆ. 13 ಜಿಲ್ಲೆಗಳಲ್ಲಿ 20 ವಿಭಾಗಗಳಿದ್ದು, 160 ಮಂಡಳಿಗಳಲ್ಲಿ ಒಟ್ಟು 3,221 ಪಂಚಾಯಿತಿಗಳಿವೆ. ಅದರಲ್ಲಿ 579 ಪಂಚಾಯತ್‌ಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಆಗಿವೆ.
ಇನ್ನುಳಿದ ಪಂಚಾಯತ್‌ಗಳಲ್ಲಿ ಈವರೆಗೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು 2,291 ಪಂಚಾಯತ್‌ಗಳನ್ನು ಗೆದ್ದಿದ್ದರೆ, ಟಿಡಿಪಿ ಬೆಂಬಲಿಗರು 263 ಪಂಚಾಯತ್‌ಗಳನ್ನು ಗೆದ್ದಿದ್ದಾರೆ. ಬಿಜೆಪಿ ಬೆಂಬಲಿಗರು 13 ಪಂಚಾಯತ್‌ಗಳಲ್ಲಷ್ಟೇ ಗೆದ್ದಿದ್ದು, ರಾಷ್ಟ್ರೀಯ ಪಕ್ಷವು ಭಾರಿ ಮುಖಭಂಗಕ್ಕೊಳಗಾಗಿದೆ. ಇತರರು 96 ಗ್ರಾಮ ಪಂಚಾಯತ್‌ಗಳನ್ನು ಗೆದ್ದಿದ್ದಾರೆ.
ಮೂರನೇ ಹಂತದ ಪಂಚಾಯತ್ ಚುನಾವಣೆಯ ಫಲಿತಾಂಶಗಳ ವಿವರಗಳು ಹೀಗಿವೆ.
ರಾಜ್ಯದಲ್ಲಿನಡೆದ ಮೂರನೇ ಹಂತದ ಪಂಚಾಯತ್ ಚುನಾವಣೆಯಲ್ಲಿ 55.75 ಲಕ್ಷ ಮತದಾರರಿದ್ದು, ಇದರಲ್ಲಿ 80.71% ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.