ಸ್ವದೇಶೀಕರಣಕ್ಕೆ ಸೌದಿ ಅರೇಬಿಯಾ ಮತ್ತಷ್ಟು ಆಧ್ಯತೆ

Prasthutha|

- Advertisement -

ಜಿದ್ದಾ:  ಸೌದಿ ಅರೇಬಿಯಾದ ಹೆಚ್ಚಿನ ಉದ್ಯೋಗ ಕ್ಷೇತ್ರಗಳಲ್ಲಿ ಸ್ವದೇಶೀಕರಣವನ್ನು ಜಾರಿಗೊಳಿಸಲು ಸಚಿವಾಲಯ ಚಿಂತನೆ ನಡೆಸಿದೆ. ಶಿಕ್ಷಣ, ಕಾನೂನು, ರೆಸ್ಟೋರೆಂಟ್‌ಗಳು, ಕೆಫೆಗಳು, ಹೈಪರ್‌ಮಾರ್ಕೆಟ್‌ಗಳಂತಹ  ಕ್ಷೇತ್ರಗಳ ಉದ್ಯೋಗಗಳಲ್ಲಿ ಸ್ವದೇಶೀಕರಣವನ್ನು ತಕ್ಷಣ ಪ್ರಾರಂಭಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಎನ್.ಜಿ. ಅಹ್ಮದ್ ಅಲ್-ರಾಜಿಹೀ ಹೇಳಿದ್ದಾರೆ. ಗುತ್ತಿಗೆದಾರರು ಮತ್ತು ಸಲಹಾ ವೃತ್ತಿಪರರ ರಾಷ್ಟ್ರೀಯ ಸಮಿತಿ ಸದಸ್ಯರೊಂದಿಗೆ ನಡೆಸಿದ ಮಾತುಕತೆಯಲ್ಲಿ ಸಚಿವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸ್ಥಳೀಯರಿಗೆ ಎಲ್ಲಾ ಇಲಾಖೆಗಳಲ್ಲೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಯತ್ನಗಳು ನಡೆಯುತ್ತಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಬಿಡುವಿನ ಸಮಯ ಅವರನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸಚಿವಾಲಯಗಳು, ಅರೆ-ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯದಿಂದ ರೂಪುಗೊಂಡ ಸಂಸ್ಥೆಗಳಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿರುವವರ ಪರಿಸ್ಥಿತಿಯನ್ನು ಸುಧಾರಿಸುವ ಅಧ್ಯಯನ ಪೂರ್ಣಗೊಂಡಿದೆ. ಅವರಿಗೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ.

- Advertisement -

ದೇಶದಲ್ಲಿ ಉದ್ಯೋಗ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು, ದಕ್ಷತೆಯನ್ನು ಹೆಚ್ಚಿಸುವುದು, ಜಾಗತಿಕ ಉದ್ಯೋಗ ಮಾರುಕಟ್ಟೆಗಳನ್ನು ಆಕರ್ಷಿಸುವುದು, ಹೆಚ್ಚಿನ ಸ್ಪರ್ಧಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳುವುದು, ಪ್ರತಿಭಾವಂತ ಜನರನ್ನು ಮಾರುಕಟ್ಟೆಗೆ ಆಕರ್ಷಿಸುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ. ಸೌದಿ ಅರೇಬಿಯಾ 2019-2020ರ ಅವಧಿಯಲ್ಲಿ ವಿವಿಧ ಸ್ವದೇಶೀಕರಣ ಚಟುವಟಿಕೆಗಳ ಮೂಲಕ ಉತ್ತಮ ಫಲಿತಾಂಶಗಳನ್ನು ಸಾಧಿಸಿದೆ. 4,20,000 ಕ್ಕೂ ಹೆಚ್ಚು ಸ್ಥಳೀಯ ಪುರುಷರು ಮತ್ತು ಮಹಿಳೆಯರು ಉದ್ಯೋಗ ಪಡೆದಿದ್ದಾರೆ. ಸಚಿವಾಲಯದ ಹೊಸ ಸೇವಾ ಪೋರ್ಟಲ್ ‘ಖುವಾ’ದ ಸೇವೆಗಳನ್ನು ಸದುಪಯೋಗಪಡಿಸಲು ಸಚಿವರು ಸಂಸ್ಥೆಗಳನ್ನು ಕೇಳಿಕೊಂಡಿದ್ದಾರೆ.

Join Whatsapp