ಲಕ್ಷದ್ವೀಪದ ಜನತೆಗೆ ವಿರುದ್ಧವಾದ ಕಾನೂನುಗಳನ್ನು ಜಾರಿಗೆ ತರುವುದಿಲ್ಲ : ಅಮಿತ್ ಶಾ

Prasthutha|

ಎ.ಪಿ ಉಸ್ತಾದರಿಗೆ ಕರೆ ಮಾಡಿ ಭರವಸೆ ನೀಡಿದ ಕೇಂದ್ರ ಗೃಹ ಸಚಿವ

- Advertisement -

ಕ್ಯಾಲಿಕಟ್ : ಲಕ್ಷದ್ವೀಪದ ಜನತೆಯ ಇಚ್ಛೆಗೆ ವಿರುದ್ಧವಾದ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಕರೆ ಮಾಡಿ ಈ ಕುರಿತು ಭರವಸೆ ನೀಡಿದ್ದಾರೆ.

ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತಂದಿರುವ ಕಾನೂನು ದ್ವೀಪ ನಿವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಬೆದರಿಕೆ ಒಡ್ಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕಾಂತಪುರಂ ಎ.ಪಿ ಉಸ್ತಾದರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಇದನ್ನು ಓದಿದ ಗೃಹ ಸಚಿವರು ಕಾಂತಪುರಂ ಉಸ್ತಾದರಿಗೆ ಖುದ್ದಾಗಿ ಕರೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಪತ್ರದಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ.

- Advertisement -

ದ್ವೀಪವಾಸಿಗಳು ಇನ್ನೂ ತೀವ್ರ ಕಳವಳದಲ್ಲಿದ್ದು, ಕಳೆದ ಆರು ತಿಂಗಳಿನಿಂದ ಅವರ ಮೇಲೆ ಹೇರಲಾದ ಕಠಿಣ ಕಾನೂನುಗಳನ್ನು ತೆಗೆದುಹಾಕಬೇಕೆಂದು ಕಾಂತಪುರಂ ಉಸ್ತಾದರು ಸಂಭಾಷಣೆಯ ನಡುವೆ ಒತ್ತಾಯಿಸಿದ್ದಾರೆ. ಜನತೆಯ ಇಚ್ಛೆಗೆ ವಿರುದ್ಧ ಜಾರಿಗೊಳಿಸಲಾದ ಹೊಸ ಕಾನೂನುಗಳನ್ನು ರದ್ದುಗೊಳಿಸಿದರೆ ಮಾತ್ರವೇ ಜನರು ನಿರ್ಭೀತಿಯಿಂದ ಜೀವಿಸಲು ಸಾಧ್ಯ ಎಂದು ಉಸ್ತಾದರು ಈ ವೇಳೆ ತಿಳಿಸಿದ್ದಾರೆ.

Join Whatsapp