ಮಂಗಳೂರು, ಜು.23: ಸಾಮಾಜಿಕ ಹೋರಾಟಗಾರ, ಕಾಂಗ್ರೆಸ್ ಮುಖಂಡ ಅಮೀರ್ ತುಂಬೆ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಕೊರೋನಾ ಸೋಂಕಿಗೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಇಂಟಕ್ ರಾಜ್ಯ ಸಮಿತಿಯ ಉಪಾಧ್ಯಕ್ಷ , ಮುಸ್ಲಿಂ ಜಸ್ಟಿಸ್ ಫೋರಂ ನ ಸ್ಥಾಪಕಾಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಡಾ.ಅಮೀರ್ ತುಂಬೆ, ಧಾರ್ಮಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅರಫಾ ಗ್ರೂಪ್ ತುಂಬೆ ಇದರ ನಿರ್ದೇಶಕರಾದ ಕೆ. ಸಾವುಂಞಿ ಹಾಜಿಯವರ ಸುಪುತ್ರರಾಗಿದ್ದ ಅಮೀರ್ ತುಂಬೆ ಸಾಮಾಜಿಕ ಹೋರಾಟಗಾರರಾಗಿದ್ದು, ಜಿಲ್ಲಾ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು.
ಅವರ ಸೇವೆಯನ್ನು ಗುರುತಿಸಿ ಇಂಟರ್ ನ್ಯಾಷನಲ್ ತಮಿಳ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ತಂದೆ, ಸಹೋದರ, ಸಹೋದರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷರಾದ ಇಜಾಝ್ ಅಹಮದ್, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸೆಲೀಮ್ ಕುಂಪನಮಜಲ್, ವಿಟ್ಲ ಅಧ್ಯಕ್ಷರಾದ ಝಕಾರಿಯಾ ಗೋಳ್ತಮಜಲ್ , ರಾಜ್ಯ ದಾರಿಮಿ ಉಲೆಮಾ ಒಕ್ಕೂಟ ಅಧ್ಯಕ್ಷರಾದ ಎಸ್ ಬಿ ದಾರಿಮಿ, ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಸೇರಿದಂತೆ ಅನೇಕ ಗಣ್ಯರು ಅಮೀರ್ ತುಂಬೆಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.