ಷೇರು ವ್ಯಾಪಾರಿಯ ಅಪಹರಣ ಮತ್ತು ದರೋಡೆ: ಹಿಂದೂ ಜಾಗರಣ ವೇದಿಕೆಯ ಮೂವರ ಬಂಧನ

Prasthutha|

ಉಡುಪಿ, ಜುಲೈ 22: ನಗರದಲ್ಲಿ ಷೇರು ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆ ಮಾಡಿದ ಪ್ರಕರಣವನ್ನು ಕೇವಲ 3 ದಿನಗಳಲ್ಲಿ ಭೇದಿಸುವಲ್ಲಿ ಉಡುಪಿ ಪೊಲೀಸರು ಯಾಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಗೆ ಸೇರಿದ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

- Advertisement -

ಷೇರು ವ್ಯಾಪಾರ ನಡೆಸುತ್ತಿದ್ದ ತುಮಕೂರು ಜಿಲ್ಲೆಯ ಅಶೋಕ್ ಕುಮಾರ್ ಎಸ್ ಎಂಬವರನ್ನು ಮೂರು ದಿನಗಳ ಹಿಂದೆ ದುಷ್ಕರ್ಮಿಗಳ ತಂಡವೊಂದು ಅಪಹರಿಸಿತ್ತು ಮತ್ತು ಅವರ ಬ್ಯಾಂಕ್ ಖಾತೆಯಿಂದ ಹಣವನ್ನು ವಂಚಿಸುವ ಪ್ರಯತ್ನ ಮಾಡಲಾಗಿತ್ತು. ಬಂಧಿತ ಆರೋಪಿಗಳನ್ನು ಉಡುಪಿ ನಿವಾಸಿ ಸಂತೋಷ್ ಬೋವಿ, ಅನಿಲ್ ಪೂಜಾರಿ ಮತ್ತು ಮಣಿ ಅಲಿಯಾಸ್ ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದೆ.


ಕಟಪಾಡಿಯ ಜಂಕ್ಷನ್ ಬಳಿಯಿಂದ ಅವರನ್ನು ಬಂಧಿಸಲಾಗಿದೆ. ಈ ಮೂವರು ಆರೆಸ್ಸೆಸ್ ಫೋಷಿತ ಹಿಂದೂ ಜಾಗರಣ ವೇದಿಕೆ (ಎಚ್.ಜೆ.ವಿ) ಯ ಕಾರ್ಯಕರ್ತರೆಂದು ಹೇಳಲಾಗುತ್ತಿದೆ. ಬಂಧಿತರಿಂದ ಒಂದು ಪಿಸ್ತೂಲ್, 1.35 ಲಕ್ಷ ನಗದು ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಈ ಮೂವರು ಆರೋಪಿಗಳನ್ನು ಜುಲೈ 23 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಜುಲೈ 16 ರಂದು ಅಶೋಕ್ ಕುಮಾರ್ ರವರನ್ನು ವ್ಯವಹಾರ ಕುದುರಿಸುವ ನೆಪದಲ್ಲಿ ಈ ತಂಡ ಕರೆಸಿ ತಮ್ಮ ಇನ್ನೋವಾ ಕಾರಿನಲ್ಲಿ ಉಡುಪಿಯ ಅಜ್ಜರಕಾಡು ಎಂಬಲ್ಲಿಂದ ಅಪಹರಿಸಿತ್ತು. ಬಳಿಕ ತೀವ್ರವಾಗಿ ಹಲ್ಲೆ ನಡೆಸಿ ಅಶೋಕ್ ರವರ ಬಳಿಯಿದ್ದ 2 ಲಕ್ಷ ರೂ. ದೋಚಿವುದರೊಂದಿಗೆ 70 ಲಕ್ಷ ರುಪಾಯಿಗೆ ಬೇಡಿಕೆಯಿಟ್ಟಿತ್ತು.
ಹಣವನ್ನು ತರುವ ಉದ್ದೇಶದಿಂದ ಜುಲೈ 17 ರಂದು ಆರೋಪಿ ಸಂತೋಷ್ ನೊಂದಿಗೆ ಬ್ಯಾಂಕ್ ತಲುಪಿದ ಅಶೋಕ್ ಕುಮಾರ್ ರವರು ತಾನು ಅಪಹರಣವಾಗಿರುವ ಕುರಿತು ಬ್ಯಾಂಕ್ ಮ್ಯಾನೇಜರ್ ಬಳಿ ತಿಳಿಸಿದಾಗ ಆರೋಪಿ ಸಂತೋಷ್ ಮತ್ತು ಸಂಗಡಿಗರು ಕಾರಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು.


ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಿಸುತ್ತಿದ್ದ ಸಂದರ್ಭದಲ್ಲಿ ಜುಲೈ 18 ರಂದು ಮಣಿಪಾಲದ ಕೊಳದ ಪಾರ್ಕೀಂಗ್ ಪ್ರದೇಶದಲ್ಲಿ ದರೋಡೆಕೋರರು ಬಳಸಿದ ಕಾರು ಪತ್ತೆಯಾಗಿದೆ. ಕಾರಿನ ಮಾಲೀಕರನ್ನು ಸಂಪರ್ಕಿಸಿದಾಗ ದರೋಡೆ ಮಾಡಿದ ದುಷ್ಕರ್ಮಿಗಳು ಕಾರನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp