ಟೆಲ್ ಅವೀವ್ : ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರ ವರದಿ ಮಾಡಲೆಂದು ತೆರಳಿದ್ದ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ʼಅಲ್ ಜಝೀರಾʼ ಪತ್ರಕರ್ತೆ ಗಿವಾರ ಬುಡೇರಿ ಅವರನ್ನು ಬಂಧಿಸಲಾಗಿದೆ. ಸ್ಥಳೀಯ ಪೊಲೀಸರ ವರ್ತನೆಯ ಬಗ್ಗೆ ವಿಶ್ವಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪತ್ರಕರ್ತೆ ಬುಡೇರಿ ಅವರನ್ನು ಬಿಡುಗಡೆ ಮಾಡಲಾಗಿದೆ.
ವರದಿಗೆ ತೆರಳಿದ್ದ ಪತ್ರಕರ್ತೆಯನ್ನು ನಾಲ್ಕೈದು ಮಂದಿ ಪೊಲೀಸರು ಎಳೆದಾಡಿ, ಕಾರಿನಲ್ಲಿ ಕೂರಿಸುತ್ತಿರುವ ದೃಶ್ಯವುಳ್ಳ ವೀಡಿಯೊ ಜಗತ್ತಿನಾದ್ಯಂತ ವೈರಲ್ ಆಗಿದೆ. ಪತ್ರಕರ್ತೆ ಬುಡೇರಿ ಅವರ ಕ್ಯಾಮೆರಾವನ್ನು ಪೊಲೀಸರು ಧ್ವಂಸ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ನನ್ನನ್ನು ಸುತ್ತುವರೆದಿದ್ದರು. ಯಾಕೆಂದು ನನಗೆ ಗೊತ್ತಿರಲಿಲ್ಲ. ಅವರು ನನ್ನನ್ನು ಕಾರಿನೊಳಗೆ ತಳ್ಳಿ ಕೆಟ್ಟದಾಗಿ ಕಾಲಿನಿಂದ ಒದ್ದರು ಎಂದು ಬುಡೇರಿ ಹೇಳಿದ್ದಾರೆ.
ಬಂಧನದ ಕೆಲವೇ ಗಂಟೆಗಳಲ್ಲಿ ಬುಡೇರಿ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ, ಪ್ರತಿಭಟನೆಗಳು ನಡೆಯುತ್ತಿರುವ ಶೇಖ್ ಜರ್ರಾ ಪ್ರದೇಶಕ್ಕೆ ಪ್ರವೇಶಿಸದಂತೆ ಹದಿನೈದು ದಿನ ಅವರಿಗೆ ನಿಷೇಧ ಹೇರಲಾಗಿದೆ ಎಂದು ಅಲ್ ಜಝೀರಾ ತಿಳಿಸಿದೆ.