ಯಡಿಯೂರಪ್ಪನವರ ರಾಜೀನಾಮೆ‌ ಹೇಳಿಕೆ ಹಿಂದೆ ಬೇರೆಯದೇ ತಂತ್ರವಿದೆ; ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆಗಳಿರುತ್ತವೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -


ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ರಾಜಕಾರಣಿದಲ್ಲಿ ಬಹಳ ತಂತ್ರಗಳಿರುತ್ತವೆ. ಹೇಳುವುದೊಂದು ಇದ್ದರೆ, ಮಾಡುವುದು ಮತ್ತೊಂದು. ಯಡಿಯೂರಪ್ಪ ಅವರದ್ದು ಬೇರೆಯದೇ ತಂತ್ರವಿದೆ. ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಸರಕಾರ ಮಾಡಿದ್ದಾರೆ. ಈಗ ಅವರನ್ನು ಬದಲಿಸುವ ನಿರ್ಧಾರ ಅವರ ಪಕ್ಷಕ್ಕೆ ಸಂಬಂಧಿಸಿದ್ದು. ನಮಗೂ ಅದಕ್ಕೂ ಸಂಬಂಧ ಇಲ್ಲ. ನನ್ನ ಪ್ರಕಾರ ಯಡಿಯೂರಪ್ಪ ಅವರು ಗಟ್ಟಿ ಮನುಷ್ಯ, ಅಷ್ಟು ಸಲೀಸಾಗಿ ಅವರು ಜಗ್ಗಲ್ಲ. ಏನೇನಾಗುತ್ತೆ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.


ಜನ ಒಪ್ಪೋದು ಬಿಡೋದು ಬೇರೆ ವಿಚಾರ. ನಾವು ವಿರೋಧ ಪಕ್ಷವಾಗಿ ಏನು ಬೇಕಾದರೂ ಹೇಳಬಹುದು. ಆಡಳಿತ ವೈಫಲ್ಯ, ಆಂತರಿಕ ಬಿಕ್ಕಟ್ಟು, ಏಳೆಂಟು ನಾಯಕರು ತಾವೇ ಸಿಎಂ ಆಗಬೇಕು ಎಂದು ಸಿದ್ಧವಾಗಿದ್ದಾರೆ. ಮುಂದೆ ಯಡಿಯೂರಪ್ಪನವರೇ ಸಿಎಂ ಎನ್ನುವವರು, ಹಿಂದೆ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ರೆಡಿಯಾಗಿದ್ದಾರೆ. ಎಲ್ಲವೂ ನಮಗೆ ಗೊತ್ತಿದೆ ಎಂದು ಹೇಳಿದರು.

- Advertisement -


ದುರ್ದೈವ ಏನೆಂದರೆ, ಬಿಜೆಪಿಯವರು ಶಿಸ್ತು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಅವರ ಹೇಳಿಕೆಯನ್ನು ಎರಡು ಮೂರು ರೀತಿಯಲ್ಲಿ ಬೇಕಾದರೂ ವಿಶ್ಲೇಷಣೆ ಮಾಡಬಹುದು. ನನ್ನನ್ನು ಮುಟ್ಟಿ ನೋಡಿ ಎಂಬ ಎಚ್ಚರಿಕೆ ಇರಬಹುದು, ನಾನು ಶಿಸ್ತಿನ ಸಿಪಾಯಿ ಅಂತಾನೂ ಇರಬಹುದು. ನೀವು ಹೇಗೆ ವಿಶ್ಲೇಷಣೆ ಮಾಡುತ್ತೀರೋ ಮಾಡಿ.
‘ಅಧಿಕಾರಿಗಳನ್ನು ವರ್ಗಾವಣೆಯಾದರೂ ಮಾಡಿಕೊಳ್ಳಲಿ, ಬೇರೆ ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಸರ್ಕಾರ ಹಾಗೂ ಅದರ ಆಡಳಿತಕ್ಕೆ ಬಿಟ್ಟ ವಿಚಾರ. ಆದರೆ ಇವರಿಂದ ಅಧಿಕಾರಿಗಳನ್ನು ನಿಯಂತ್ರಿಸಲು ಆಗುವುದಿಲ್ಲ ಎನ್ನುವುದು ಜನರಿಗೆ ಅರ್ಥವಾಗಿದೆ. ನಿತ್ಯ ಮಾಧ್ಯಮಗಳ ವರದಿ ನೋಡಿದಾಗ, ಇಡೀ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಆಡಳಿತಾತ್ಮಕವಾಗಿ ಯಾವುದೇ ನಿಯಂತ್ರಣ ಇಲ್ಲವಾಗಿದೆ. ಇದೆಲ್ಲದರಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ಸಾಮಾನ್ಯ ಜನ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

Join Whatsapp