ನವದೆಹಲಿ; ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ
ಏರ್ ಇಂಡಿಯಾವನ್ನು ಜನವರಿ 27ರಂದು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಕುರಿತ ಪ್ರಕ್ರಿಯೆಗಳು ಬಹುತೇಕ ಅಂತಿಮಗೊಂಡಿದೆ.
ಈ ಕುರಿತು ಏರ್ ಇಂಡಿಯಾ ಉದ್ಯೋಗಿಗಳಿಗೆ ಈ ಮೇಲ್ ರವಾನಿಸಿರುವ ಏರ್ ಇಂಡಿಯಾದ ಹಣಕಾಸು ವಿಭಾಗದ ನಿರ್ದೇಶಕ ವಿನೋದ್ ಹೆಜ್ಮಾಡಿ, ಜನವರಿ 20ಕ್ಕೆ ಅನ್ವಯವಾಗುವಂತೆ ಸಂಸ್ಥೆಯ ಬ್ಯಾಲೆನ್ಸ್ ಶೀಟ್ ಮುಕ್ತಾಯಗೊಳಿಸಲಾಗುವುದು, ಹಾಗೂ ಜನವರಿ 27ರಂದು ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಹರಾಜು ಪ್ರಕ್ರಿಯೆಯ ನಂತರ ಕಳೆದ ವರ್ಷ ಅಕ್ಟೋಬರ್ 8ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು.
ಅಕ್ಟೋಬರ್ 11ರಂದು ಟಾಟಾ ಸಮೂಹಕ್ಕೆ ಲೆಟರ್ ಆಫ್ ಇಂಟೆಂಟ್ -LOI ಅನ್ನು ನೀಡಲಾಯಿತು. ಇದು ವಿಮಾನಯಾನ ಸಂಸ್ಥೆಯಲ್ಲಿ ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಿತು. ಅಕ್ಟೋಬರ್ 25ರಂದು ಈ ಒಪ್ಪಂದಕ್ಕೆ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು.