ಉಡುಪಿ ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ಪ್ರವೇಶ ನಿಷೇಧಕ್ಕೆ ವುಮೆನ್ಸ್ ಫ್ರೆಟರ್ನಿಟಿ ಫೋರಂ ಖಂಡನೆ

Prasthutha|

ದಮ್ಮಾಮ್: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧ ಹೇರಿರುವ ಘಟನೆಯನ್ನು ವುಮೆನ್ಸ್ ಫ್ರೆಟರ್ನಿಟಿ ಫೋರಂ (ಡಬ್ಲ್ಯು.ಎಫ್.ಎಫ್) ದಮ್ಮಾಮ್ ಅಧ್ಯಕ್ಷೆ ನೌಸಿಬಾ ಆದಂ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವು ಸಂವಿಧಾನ ವಿರೋಧಿಯಾಗಿದ್ದು,  ತಕ್ಷಣವೇ ನಿಷೇಧವನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

- Advertisement -

ತಮ್ಮಿಚ್ಛೆಯ ಧರ್ಮ, ಸಂಸ್ಕೃತಿ, ಆಚರಣೆಗಳನ್ನು ಅನುಸರಿಸುವ ಮತ್ತು ವೇಷ ಭೂಷಣವನ್ನು ತೊಡುವ ಹಕ್ಕನ್ನು ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡುತ್ತದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧಿಸುವ ಮೂಲಕ ಕಾಲೇಜು ಆಡಳಿತವು ಅವರ ಧಾರ್ಮಿಕ ಹಾಗೂ ಶಿಕ್ಷಣವನ್ನು ಪಡೆಯುವ ಮೂಲಭೂತ  ಹಕ್ಕನ್ನು ಸ್ಪಷ್ಟವಾಗಿ‌ ಉಲ್ಲಂಘಿಸಿದೆ‌ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವನ್ನೊಳಗೊಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವುದಾಗಿ ಸಾಚಾರ್ ಸಮಿತಿಯೊಳಗೊಂಡಂತೆ ವಿವಿಧ ಸರಕಾರಗಳು ಆಯೋಜಿಸಿದ ಆಯೋಗಗಳು ವರದಿಗಳನ್ನಿಟ್ಟಿವೆ. ಈ ವರ್ಗವು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣವು ಕೀಲಿಕೈಯಾಗಿದೆ. ಇತ್ತೀಚೆಗೆ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಲ್ಲಿ ಶಿಕ್ಷಣದ ಕುರಿತು‌ ಜಾಗೃತಿಯುಂಟಾಗಿದ್ದು, ಹೆಚ್ಚು ಹೆಚ್ಚು ಮಂದಿ ಕಾಲೇಜು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಹಿಳಾ ಶಿಕ್ಷಣವು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ‌ ಅಡಿಗಲ್ಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ತಮ್ಮ ಹಕ್ಕುಗಳ ಕುರಿತು ಜಾಗೃತಗೊಂಡಿರುವ ಅಲ್ಪಸಂಖ್ಯಾತ ಮಹಿಳೆಯರು  ಸಿ.ಎ.ಎ-ಎನ್.ಆರ್.ಸಿ ಒಳಗೊಂಡಂತೆ ಹಲವು ರಾಜಕೀಯ ಹೋರಾಟಗಳಲ್ಲೂ ಮುಂಚೂಣಿಯನ್ನು ವಹಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಹೀಗಿರುವಾಗ  ಮುಸ್ಲಿಂ ಸಬಲೀಕರಣವನ್ನು ಭಯಪಡುವ ಫ್ಯಾಶಿಸ್ಟ್ ಮನಸ್ಥಿತಿಯ ಭಾಗವಾಗಿ ಉಡುಪಿ ಕಾಲೇಜಿನ ಈ ಘಟನೆಯನ್ನು ನೋಡಬೇಕಾಗಿದ್ದು, ಇಂಥಹ ಘಟನೆ ಎಲ್ಲೆಡೆ ಮರುಕಳಿಸುವ ಮುಂಚೆ ಜಾತ್ಯತೀತ ಸಮುದಾಯ ಧ್ವನಿ ಎಬ್ಬಿಸಬೇಕಾಗಿದೆ ಎಂದು ನೌಸಿಬಾ ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ  ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಮೇಲೆ ದಾಳಿಯು ವ್ಯಾಪಕವಾಗಿದೆ. ಇದಕ್ಕಾಗಿ ಹಲವು ನೆಪಗಳನ್ನು ಮುಂದೊಡ್ಡಲಾಗುತ್ತದೆ. ಇದೀಗ ಉಡುಪಿ ಹಿಜಾಬ್ ನಿಷೇಧಕ್ಕೆ ಸಮಾನ ವಸ್ತ್ರ ಸಂಹಿತೆ ಎಂಬ ನೆಪವನ್ನು ಮುಂದಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಾಸ್ತವದಲ್ಲಿ ಇದು ದೇಶದಲ್ಲಿ ಬಹುತ್ವವನ್ನು ನಾಶಪಡಿಸಿ ಮನುವಾದ‌ ಆಧರಿತ ಏಕ ಸಂಸ್ಕೃತಿಯನ್ನು ಜಾರಿಗೊಳಿಸುವ ಹಿಂದುತ್ವದ ಕುತಂತ್ರದ ಭಾಗವಾಗಿದೆಯಷ್ಟೆ ಎಂಬುದನ್ನು  ಎಲ್ಲಾ ಮಹಿಳಾ ಹಕ್ಕು ಸಂಘಟನೆಗಳು ಅರ್ಥೈಸಿಕೊಳ್ಳಬೇಕು. ಅಂತಿಮವಾಗಿ ಮನುವಾದವು ಎಂದೆಂದಿಗೂ ದೇಶದ ಎಲ್ಲಾ ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗೆ ವಿರುದ್ಧವಾಗಿದ್ದು, ಮನುವಾದ ಆಧರಿತ ಹಿಂದುತ್ವದ ಕುತಂತ್ರಗಳನ್ನು ವಿರೋಧಿಸಲು ಸಮಸ್ತ ಮಹಿಳಾ ಸಂಘಟನೆಗಳು ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.

Join Whatsapp