ಕೊಲೆ ಮಾಡಿ ಹೆಣ ರಸ್ತೆ ಬದಿ ಎಸೆದಿದ್ದ ದಂಪತಿ ಬಂಧನ

Prasthutha|

ಬೆಂಗಳೂರು: ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಸಾಗಿಸಿ ನಿರ್ಜನ ಪ್ರದೇಶದ ರಸ್ತೆಯ ಬದಿ ಎಸೆದು ಬಂದಿದ್ದ ಪ್ರಕರಣವನ್ನು ಬೇಧಿಸಿರುವ  ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಎಲೆಕ್ಟ್ರಾನಿಕ್ ಸಿಟಿಯ ರೀನಾ, ಗಂಗೇಶ್ ಹಾಗೂ ಬಿಜೋಯ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ದಂಪತಿ ನಿಬಾಶೀಶ್ ಪಾಲ್ ಎಂಬಾತನನ್ನು ಕೊಲೆ ಮಾಡಿದ ನಂತರ ಹೆಣ ಸಾಗಿಸಲು  ಮತ್ತೊಬ್ಬ  ಆರೋಪಿ ಬಿಜೋಯ್ ನ ಸಹಾಯ ಪಡೆದಿದ್ದರು ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಡಿಸಿಪಿ ಚಂದ್ರಶೇಖರ ಬಾಬಾ ತಿಳಿಸಿದರು.

ರೀನಾ ಮತ್ತು ಗಂಗೇಶ್ ಗಂಡ ಹೆಂಡತಿಯಾಗಿದ್ದಾರೆ. ಆದರೂ ರೀನಾ ಮತ್ತು ಕೊಲೆಯಾದ ನಿಬಾಶೀಶ್ ಪಾಲ್ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ರೀನಾ ಪತಿ ಗಂಗೇಶ್ ಸ್ವಂತ ರಾಜ್ಯ ಉತ್ತರ ಪ್ರದೇಶಕ್ಕೆ ಹೋಗಿದ್ದ. ಈ ನಡುವೆ ರೀನಾಗೆ ನಿಬಾಶೀಶ್ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಹಣಕ್ಕಾಗಿ ಬೇರೆಯವರ ಜೊತೆ ಮಲಗಲು ರೀನಾಗೆ ಒತ್ತಾಯ ಮಾಡುತ್ತಿದ್ದ. ಹೀಗಾಗಿ ತನ್ನ ಪತಿ ಗಂಗೇಶ್​ಗೆ ಕರೆ ಮಾಡಿದ ರೀನಾ, ವಾಪಸ್ ಬರುವಂತೆ ಸೂಚಿಸಿದ್ದಾಳೆ.

- Advertisement -

ಪತಿಯನ್ನು ಕರೆಸಿಕೊಂಡ ರೀನಾ, ನಿಬಾಶೀಶ್ ಕಿರುಕುಳವನ್ನು ಹೇಳಿಕೊಂಡಿದ್ದಾಳೆ. ಹೀಗಾಗಿ ದಂಪತಿ ಸೇರಿಕೊಂಡು ನಿಬಾಶೀಶ್ ಕೊಲೆ ಮಾಡಲು ಸಂಚು ರೂಪಿಸುತ್ತಾರೆ. ಅದರಂತೆ ನಿಬಾಶೀಶ್​ಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಲ್​ಗೆ ಊಟದಲ್ಲಿ ಗಾಂಜಾದ ಬೀಜವನ್ನು ಹಾಕಿ ಅಮಲು ಬರುವಂತೆ ಮಾಡಿದ್ದರು.

ನಿಬಾಶೀಶ್ ಕೊಲೆ ನಂತರ ಹೆಣ ಸಾಗಿಸಲು ಗಂಗೇಶ್ ತನ್ನ ಸ್ನೇಹಿತ ಬಿಜೋಯ್ ಸಹಾಯ ಪಡೆದಿದ್ದಾನೆ. ಗಂಗೇಶ್ ಹಾಗೂ ಬಿಜೋಯ್ ನಿಬಾಶೀಶ್ ಮೃತದೇಹವನ್ನು ಬೈಕ್ ​ನ ಮಧ್ಯ ಕೂರಿಸಿಕೊಂಡು ಒಂದು ಕಿಲೋ ಮೀಟರ್ ದೂರದವರೆಗೆ ತ್ರಿಬಲ್ ರೈಡ್ ಹೋಗಿ ರಸ್ತೆ ಬದಿ ಹೆಣ ಎಸೆದು ಬಂದಿದ್ದರು. ಬಳಿಕ ಆರೋಪಿಗಳು ಮನೆಯನ್ನೇ ಖಾಲಿ ಮಾಡಿ ಪರಾರಿಯಾಗಿದ್ದರು.

ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಶಿಕಾರಿಪುರದಲ್ಲಿ ರೀನಾ ಹಾಗೂ ಗಂಗೇಶ್​​ನನ್ನು ಬಂಧಿಸಿ ಕರೆತಂದಿದ್ದಾರೆ. ಹೆಣ ಸಾಗಿಸಲು ನೆರವಾಗಿದ್ದ ಬಿಜೋಯ್ ನನ್ನು ಕೂಡ ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp