ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆಗೈದಿದ್ದ ಧರ್ಮದರ್ಶಿ ಬಂಧನ

Prasthutha|

ಬೆಂಗಳೂರು: ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಧರ್ಮದರ್ಶಿ ಮುನಿಕೃಷ್ಣನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಕಳೆದ ಡಿ.21 ರಂದು ಪೂಜೆಗೆ ಹೋಗಿದ್ದ ಹೇಮಾವತಿ ಎಂಬ ಮಹಿಳೆಯ ಮೇಲೆ ಆಡಳಿತ ಮಂಡಳಿಯವರು ಹಿಗ್ಗಾ ಮುಗ್ಗ ಥಳಿಸಿ, ಜಡೆ ಹಿಡಿದು ಹೊರೆಗೆ ಎಳೆದೊಯ್ದಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

“ನನ್ನನ್ನು ದೇವಸ್ಥಾನದ ಒಳಗೆ ಬಿಡಲು ನಿರಾಕರಿಸಿ ಹಲ್ಲೆ ಮಾಡಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು” ಎಂದು ಈ ವಿಚಾರವನ್ನು ತಡವಾಗಿ ಪತಿಗೆ ತಿಳಿಸಿದ್ದ ಹೇಮಾವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

- Advertisement -

ಪ್ರಕರಣ ಬೆಳಕಿಗೆ ಬಂದು ಠಾಣೆ ಮೆಟ್ಟಿಲೇರುತ್ತಿದ್ದಂತೆ ಧರ್ಮದರ್ಶಿ ಮುನಿಕೃಷ್ಣ ಪೊಲೀಸರ ಮುಂದೆ ಹೇಳಿದ್ದೇ ಬೇರೆ. “ನನ್ನ ಮೇಲೆ ದೇವರು ಬರುತ್ತದೆ. ವೆಂಕಟೇಶ್ವರ ನನ್ನ ಪತಿಯಾಗಿದ್ದು, ಗರ್ಭಗುಡಿಯಲ್ಲಿ ನಾನು ವೆಂಕಟೇಶ್ವರನ ಪಕ್ಕ ಕುಳಿತುಕೊಳ್ಳಬೇಕು ಎಂದು ದೇವಸ್ಥಾನದಲ್ಲಿ ಪಟ್ಟು ಹಿಡಿದಿದ್ದ ಮಹಿಳೆಗೆ ವಿರೋಧ ವ್ಯಕ್ತಪಡಿಸಿದ್ದ ಅರ್ಚಕರ ಮೇಲೆಯೇ ಉಗಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ” ಎಂದು ಆರೋಪಿಸಿದ್ದಾನೆ.

ಎಷ್ಟೇ ಮನವಿ ಮಾಡಿಕೊಂಡರೂ ಮಹಿಳೆ ಕೇಳದಿದ್ದಾಗ ಆಡಳಿತ ಮಂಡಳಿಯವರು ಸೇರಿ ಥಳಿಸಿದ್ದೇವೆ, ಜೊತೆಗೆ ಘಟನೆ ನಡೆದ ಕೆಲ ದಿನಗಳ ನಂತರ ದೇವಾಲಯಕ್ಕೆ ಬಂದು ಕ್ಷಮೆ ಕೇಳಿದ್ದಳು ಎಂದಿದ್ದಾನೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ಮುನಿಕೃಷ್ಣನನ್ನು ಬಂಧಿಸಿದ ಅಮೃತಹಳ್ಳಿ ಠಾಣೆ ಪೊಲೀಸರು, ವಿಚಾರಣೆಯನ್ನು ಮುಂದುವರೆಸಿದ್ದಾರೆ.

Join Whatsapp