ಹೊಸದಿಲ್ಲಿ: ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟವಾದ ಬಳಿಕ ಪೀಠದ ಭಾಗವಾಗಿದ್ದ ಇತರ ನ್ಯಾಯಾಧೀಶರ ಜತೆ ತಾಜ್ ಹೊಟೇಲ್ ನಲ್ಲಿ ಭೋಜನ ಸೇವಿಸಿದ್ದೇನೆ ಎಂದು ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಾಜ್ಯಸಭಾ ಸಂಸದ ರಂಜನ್ ಗೊಗಯ್ ತನ್ನ ಆತ್ಮ ಚರಿತ್ರೆಯಲ್ಲಿ ಹೇಳಿದ್ದಾರೆ.
“ಜಸ್ಟಿಸ್ ಫಾರ್ ದಿ ಜಡ್ಜ್: ಆನ್ ಆಟೋಬಯೋಗ್ರಫಿ” ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ವೃತ್ತಿಜೀವನಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಘಟನೆಗಳ ಬಗ್ಗೆ ಬರೆದಿರುವ ಅವರು, “ತೀರ್ಪಿನ ನಂತರ, ಸೆಕ್ರೆಟರಿ ಜನರಲ್ ಅವರು ಅಶೋಕ ಚಕ್ರದ ಕೆಳಗೆ ಕೋರ್ಟ್ ನಂ 1 ರ ಹೊರಗಿನ ನ್ಯಾಯಾಧೀಶರ ಗ್ಯಾಲರಿಯಲ್ಲಿ ಫೋಟೋ ಸೆಷನ್ ಅನ್ನು ಆಯೋಜಿಸಿದರು. ಸಂಜೆ ನಾನು ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ತಾಜ್ ಮಾನ್ ಸಿಂಗ್ ಹೋಟೆಲ್ಗೆ ಊಟಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಲಭ್ಯವಿರುವ ಅತ್ಯುತ್ತಮವಾದ ವೈನ್ ಬಾಟಲಿಯನ್ನು ಹಂಚಿಕೊಂಡು, ನಾವು ಚೈನೀಸ್ ಆಹಾರವನ್ನು ಸೇವಿಸಿದೆವು. ಹಿರಿಯವನಾಗಿ ನಾನೇ ಅಂದು ಬಿಲ್ಲನ್ನು ಪಾವತಿಸಿದೆ” ಎಂದು ಹೇಳಿದ್ದಾರೆ.
ಅಯೋಧ್ಯೆ ಪ್ರಕರಣದ ಬಗ್ಗೆ 2019 ನವೆಂಬರ್ 9ರಂದು ತೀರ್ಪನ್ನು ನೀಡಲಾಗಿತ್ತು. ರಂಜನ್ ಗೊಗಯ್ ಜೊತೆಗೆ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್, ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತ್ತು.
ರಂಜನ್ ಗೊಗಯ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ತನ್ನ ಮೇಲಿನ ಲೈಂಗಿಕ ಪ್ರಕರಣ, 2018 ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬರೆದಿದ್ದಾರೆ.