ಮೊಯ್ದಿನ್ ಬಾವಾ ಸೇರ್ಪಡೆಯಿಂದ ಜೆಡಿಎಸ್’ಗೆ ಆನೆಬಲ : ಬಿ.ಎಂ ಫಾರೂಕ್

Prasthutha|

ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರಿಂದ ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಆನೆಬಲ ಬಂದಿದೆ ಎಂದು ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್ ಹೇಳಿದರು. ನಗರದ ಖಾಸಗಿ ಹೋಟೆಲ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಖಾತೆ ತೆರಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

- Advertisement -

ಮೊಯ್ದಿನ್ ಬಾವಾ ಸ್ಪರ್ಧೆಯಿಂದ ಮಂಗಳೂರು ಉತ್ತರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಬದಲಾಗಿದೆ. ಮೊಯ್ದಿನ್ ಬಾವಾ ಸ್ಥಳೀಯರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಹಣಾಹಣಿ ಏರ್ಪಟ್ಟಿದ್ದು ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂದು ಹೇಳಿದರು.

ಮೊಯ್ದಿನ್ ಬಾವಾ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕಳೆದ ಬಾರಿ ಸೋತರೂ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ಜಾತಿ ಧರ್ಮ ನೋಡದೇ ಹಗಲು ರಾತ್ರಿ ಜನರ ಸೇವೆ ಮಾಡಿದ್ದರು. ಟಿಕೆಟ್ ಹಂಚಿಕೆ ಸಂಬಂಧ ನಡೆದ ಸರ್ವೇಗಳಲ್ಲಿ ಬಾವಾ ಪರ ಜನರ ಒಲವು ಇದ್ದರೂ, ಕಾಂಗ್ರೆಸ್ ಪಕ್ಷ ಬಾವಾ ಅವರನ್ನು ರಂಝಾನ್ ಉಪವಾಸದ ಸಮಯದಲ್ಲೇ ಅಲೆದಾಡಿಸಿ ಟಿಕೆಟ್ ನಿರಾಕರಿಸಿದೆ ಎಂದು ಅವರು ದೂರಿದರು.

- Advertisement -

ಮೊಯ್ದಿನ್ ಬಾವಾ ಪರವಾಗಿ ಪ್ರಚಾರ ನಡೆಸಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಗಳೂರಿಗೆ ಬರಲಿದ್ದಾರೆ. ಮೇ 1ರ ಸೋಮವಾರ ಕೈಕಂಬದಲ್ಲಿ ದೇವೇಗೌಡರ ಸಮಾವೇಶ ನಡೆಯಲಿದ್ದು, ಮೇ 5ರಂದು ಕೃಷ್ಣಾಪುರದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶದಲ್ಲಿ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ಬಿ.ಎಂ ಫಾರೂಕ್ ಮಾಹಿತಿ ನೀಡಿದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಅವರು, ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಭರವಸೆಗಳನ್ನು ಒಪ್ಪಿ ಜನರು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Join Whatsapp