ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಆರೋಗ್ಯ ಹದಗೆಡುತ್ತಿದೆ : ಕುಟುಂಬದ ಆರೋಪ

Prasthutha|

ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆ, ಹಿರಿಯ ವಕೀಲೆ ಸುಧಾ ಭಾರದ್ವಾಜ್ ಅವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ ಎಂದು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ. ಭಾರದ್ವಾಜ್ ಅವರನ್ನು ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಲ್ಲಿರಿಸಲಾಗಿದ್ದು, ಏಪ್ರಿಲ್ ತಿಂಗಳಲ್ಲಿ 40 ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ಭಾರದ್ವಾಜ್ ಕೊರೊನಾ ನೆಗೆಟಿವ್ ವರದಿ ಬಂದಿತ್ತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಎರಡು ವಾರಗಳ ಹಿಂದೆ ಜೈಲು ಅಧೀಕ್ಷಕರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ಮನವಿ ಮಾಡಲಾಗಿದೆ. ಭಾರದ್ವಾಜ್ ಕಳೆದ ಮೂರು ವಾರಗಳಿಂದ ಮಧುಮೇಹ, ಹಸಿವು ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.   ಭಾರದ್ವಾಜ್ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಇದಕ್ಕಾಗಿ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ. ನಾವು ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡುತ್ತಿದ್ದೇವೆ, ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಸೋಂಕು ಉಲ್ಲೇಖಿಸಿ ಭಾರದ್ವಾಜ್ ಕಳೆದ ಜೂನ್ ನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದರು.  ಮಧುಮೇಹ, ಅಧಿಕ ರಕ್ತದೊತ್ತಡದಿಂದ ಅವರು ಬಳಲುತ್ತಿದ್ದು, ಈ ಹಿಂದೆ ಶ್ವಾಸಕೋಶದ ಕ್ಷಯರೋಗ ಕೂಡ ಇತ್ತು ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ಭಾರದ್ವಾಜ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

Join Whatsapp