ವಾಷಿಂಗ್ಟನ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ರೀಝರ್‌ನೊಳಗೆ ಅವಿತಿದ್ದ ಪ್ರಕರಣವೊಂದರ ಆರೋಪಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಅಮೇರಿಕದ ಮಿನಸೋಟಾ ಎಂಬಲ್ಲಿನ ಬ್ರಾಂಡನ್ ಲೀ ಬ್ರುಷ್‌ಮನ್ ಎಂಬಾತನ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆತನ ಬೆನ್ನು ಬಿದ್ದಿದ್ದರು.
ಜೂ.26 ರಂದು ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು 34 ವರ್ಷದ ಬ್ರಾಂಡನ್ ಲೀ ಖಾಲಿ ಮನೆಯೊಂದರಲ್ಲಿದ್ದ ಫ್ರೀಝರ್ ಒಳಗೆ ಅವಿತಿದ್ದಾನೆ. ಆದರೆ ಫ್ರೀಝರ್‌ನಿಂದ ಹೊರಬರಲಾರದೆ ಬ್ರಾಂಡನ್ ಲೀ ಅದರೊಳಗೆಯೇ ಮೃತಪಟ್ಟಿದ್ದಾನೆ.
ಸುಮಾರು 15 ದಿನಗಳ ಬಳಿಕ ಆತನನ್ನು ಹುಡುಕಾಡುತ್ತಿದ್ದ ಪೊಲೀಸರಿಗೆ ಆತ ಅವಿತುಕೊಳ್ಳಲು ಖಾಲಿ ಮನೆಯೊಳಗೆ ಬಂದ ಮಾಹಿತಿ ಸಿಕ್ಕಿದೆ. ಅದರಂತೆ ಮನೆಯೊಳಗೆ ಹುಡುಕಾಡಿದ ಪೊಲೀಸರು ಫ್ರೀಝರ್‌ನ ಒಳಗೆ ನೋಡಿ ಬೆಚ್ಚಿ ಬಿದ್ದಿದ್ದಾರೆ.!
ಬ್ರಾಂಡನ್ ಲೀ ಅವಿತಿದ್ದ ಮನೆಯನ್ನು ಕಳೆದ ಫೆಬ್ರವರಿಯಲ್ಲೇ ಮನೆಯನ್ನು ಖಾಲಿ ಮಾಡಲಾಗಿತ್ತು. ಎಪ್ರಿಲ್ ಬಳಿಕ ಮನೆಗೆ ಸಂಬಂಧಪಟ್ಟವರು ಯಾರೂ ಅಲ್ಲಿಗೆ ಬಂದಿರಲಿಲ್ಲ. ಈ ಮನೆಯಲ್ಲಿದ್ದ ಹಳೆಯ ಮಾದರಿಯ ಫ್ರೀಝರ್‌ನಲ್ಲಿ ಬ್ರಾಂಡನ್ ಲೀ ಅವಿತಿದ್ದು ಒಳಗಿನಿಂದ ಬಾಗಿಲು ತೆರೆಯುವ ಯಾವ ಆಯ್ಕೆಯೂ ಫ್ರೀಜರ್‌ನಲ್ಲಿ ಇರಲಿಲ್ಲ. ಹೀಗಾಗಿ ಆತ ಅದರಿಂದ ಹೊರಬರಲಾರದೆ ಮೃತಪಟ್ಟಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಬ್ರಾಂಡನ್ ಲೀ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು ಎಂಬ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿಲ್ಲ.