ಕೋರಮಂಗಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಟೀ, ಪಕೋಡ ಮಾರಿ ಬಿಬಿಎಂಪಿಗೆ ದೇಣಿಗೆ: ಆಪ್ ವಿನೂತನ ಪ್ರತಿಭಟನೆ

Prasthutha|

ಬೆಂಗಳೂರು : ಟೀ, ಪಕೋಡ ಹಾಗೂ ಟಿಕೆಟ್ ಮಾರುವುದರ ಮೂಲಕ ಕೋರಮಂಗಲ ಮೇಲ್ಸೇತುವೆ ಕಾಮಗಾರಿ ಶೀಘ್ರ ಮುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು, ನಿವಾಸಿಗಳು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು. ನಗರದ ಸೋನಿ ವರ್ಲ್ಡ್ ವೃತ್ತದ ಬಳಿ, ಕೋರಮಂಲಗ ಮೇಲ್ಸೇತುವೆ ಕಾಮಗಾರಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಪ್ರತಿಭಟನೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ನಗರದ ಎರಡನೇ ಅತಿ ದೊಡ್ಡ ಮೇಲ್ಸೇತುವೆ ಎಂದು ಮಂಕುಬೂದಿ ಎರಚಿ ಪ್ರಾರಂಭಿಸಿದ ಕೋರಂಮಗಲ ಎಲಿವೇಟೆಡ್ ಮೇಲ್ಸೇತುವೆ ಕಾಮಗಾರಿ 4 ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ, ಆದ ಕಾರಣ ಇದನ್ನು ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕವಾಗಿ ಘೋಷಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.

- Advertisement -

ಕೋರಮಂಗಲ 100 ಅಡಿ ಮುಖ್ಯರಸ್ತೆಯಿಂದ ಈಜೀಪುರ ಮುಖ್ಯರಸ್ತೆ – ಒಳವರ್ತುಲ ರಸ್ತೆ ಜಂಕ್ಷನಿಂದ ಕೇಂದ್ರಿಯ ಸದನ ಜಂಕ್ಷನ್ ತನಕ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು 2.4 ಕಿಮೀ ಉದ್ದವಿದೆ. ನಗರೋಥ್ಥಾನ ಯೋಜನೆ ಅಡಿ 203.20 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಮೇಲ್ಸೇತುವೆ ಕಾಮಗಾರಿಯನ್ನು 2017 ಜುಲೈನಲ್ಲಿ ಉದ್ಘಾಟಿಸಲಾಯಿತು. 2019 ಕ್ಕೆ ಮುಗಿಯಬೇಕಾದ ಕಾಮಗಾರಿ ಇನ್ನೂ ಮುಗಿದಿಲ್ಲ. 203 ಕೋಟಿಯಲ್ಲಿ ಎಷ್ಟು ಖರ್ಚಾಗಿದೆ ಎಂಬುದು ಯಾರ ಬಳಿಯೂ ಮಾಹಿತಿ ಇಲ್ಲ, ಬೇಕಾದಾಗ ಬಂದು ಏನು ಬೇಕಾದರೂ ತಿಂದು ಹೋಗಲು ಇದು ಮಾವನ ಮನೆಯೇ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬೃಹತ್ ಭ್ರಷ್ಟಾಚಾರದ ಸ್ಮಾರಕಗಳ ಬಳಿ ಟೀ ಅಂಗಡಿ, ಪಕೋಡ ಹಾಗೂ ಸ್ಮಾರಕ ವೀಕ್ಷಿಸಲು ಟಿಕೆಟ್ ಮಾರಾಟ ಮಾಡಿ ಆ ಹಣವನ್ನು ಕಾಮಗಾರಿ ನಿಧಿಗೆ ಕೊಡಲಾಗುವುದು ಎಂದರು. ಕೋರಮಂಗಲದ ನಿವಾಸಿಗಳು ದಿನನಿತ್ಯ ಸಂಚಾರ ದಟ್ಟಣೆಯಿಂದ ನರಕ ಅನುಭವಿಸುತ್ತಿದ್ದಾರೆ. ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಂಡು ಬಾಯಿ ಚಪಲದ ಮಾತುಗಳನ್ನಾಡುತ್ತಿದ್ದಾರೆ ಹೊರತು ಕಾಮಗಾರಿ ಮುಗಿಸಲು ಒತ್ತಡ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮಾಧ್ಯಮ‌ ಸಂಚಾಲಕ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

- Advertisement -