ದೇಶದಲ್ಲಿ ನಡೆದ ಹಲವಾರು ಘಟನೆ ಸಂಬಂಧ ಎಸ್ ಡಿಪಿಐ, ಪಿಎಫ್ಐ ಮೇಲೆ ಎನ್ಐಎ ದಾಳಿ ನಡೆಸಿದೆ. ಎನ್ಐಎ ದಾಳಿ ನಡೆಸುವಂತಹ ಬಾಂಬ್ ಅಟ್ಯಾಕ್ ಆಗಲೀ, ಭಯೋತ್ಪಾದಕರ ದಾಳಿಯಾಗಲೀ, ಗಣ್ಯರ ಹತ್ಯೆಯಾಗಲೀ ಇತ್ತಿಚೆಗೆ ನಮ್ಮ ದೇಶದಲ್ಲಿ ನಡೆದಿಲ್ಲ. ವಿಚಿತ್ರ ಎಂದರೆ ಎಸ್ ಡಿಪಿಐ ಕಚೇರಿಯ ಮೇಲೆ ಎನ್ಐಎ ದಾಳಿ ನಡೆಸಿರುವುದು ಸಣ್ಣಪುಟ್ಟ ಘಟನೆಗಳ ಹಿನ್ನೆಲೆಯಲ್ಲಿ ! ಠಾಣೆಯ ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಒಬ್ಬರು ತನಿಖೆ ಮಾಡಬಹುದಾದ ಪ್ರಕರಣಗಳನ್ನು ಎನ್ಐಎಯಿಂದ ತನಿಖೆ ನಡೆಸಿ ಎಸ್ ಡಿಪಿಐ, ಪಿಎಫ್ಐ ಕಾರ್ಯಕರ್ತರ ಮೇಲೆ ಯುಎಪಿಎ ಕೇಸ್ ದಾಖಲು ಮಾಡಲಾಗುತ್ತಿದೆ. ಇದನ್ನು ಎಲ್ಲರೂ ವಿರೋಧಿಸಲೇಬೇಕು.
ಪ್ರವೀಣ್ ನೆಟ್ಟಾರ್ ಕೊಲೆ ದೇಶದ್ರೋಹ ಹೇಗಾಗುತ್ತೆ ?ಹಾಗಿದ್ದರೆ ಫಾಸಿಲ್, ಮಸೂದ್ ಕೊಲೆ ಯಾಕೆ ದೇಶದ್ರೋಹ ಆಗಲ್ಲ? ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ್ದು ದೇಶದ್ರೋಹವಾದರೆ, ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಮನೆಗೆ ನುಗ್ಗಿ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದು ಯಾಕೆ ದೇಶದ್ರೋಹವಲ್ಲ ? ಡಿಜೆ ಹಳ್ಳಿಯಲ್ಲಿ ನಡೆದ ಕಲ್ಲು ತೂರಾಟ ದೇಶದ್ರೋಹವಾದರೆ, ಬಿಜೆಪಿಗರು ಸುಳ್ಯ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು ಯಾಕೆ ದೇಶದ್ರೋಹ ಆಗಲ್ಲ ?
ಹೀಗೆ ಸಣ್ಣಪುಟ್ಟ ಪ್ರಕರಣಗಳಿಗೆ ದೇಶದ್ರೋಹ ಪ್ರಕರಣ ದಾಖಲಿಸಿದರೆ ನಾಳೆ ಸರ್ಕಾರದ ಪರ ಇಲ್ಲದವರ ಮೇಲೆಲ್ಲಾ ದೇಶದ್ರೋಹ ಕಾಯ್ದೆ ದಾಖಲಿಸುವುದು ಸಹಜವಾಗಿ ಬಿಡುತ್ತದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ.
ಹಾಗಾಗಿ ರಾಜ್ಯಗಳ ಕಾನೂನು ಸುವ್ಯವಸ್ಥೆ ವಿಷಯಕ್ಕೆ ಎನ್ಐಎ, ಸಿಬಿಐ ಯನ್ನು ಬಳಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಬೇಕಿದೆ. ರಾಜ್ಯಗಳ ಪೊಲೀಸರೆಂದರೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸೆಕ್ಯೂರಿಟಿ ಕೊಡುವವರಲ್ಲ ಎಂದು ರಾಜ್ಯಗಳು ಹೇಳಬೇಕಿದೆ.