ಪಂಪ ರಸ್ತೆ ಹೆಸರು ಬದಲಾವಣೆ: ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಪರಂಪರೆ ನೀಡಿರುವ ಕೊಡುಗೆಗೆ ಬಿಜೆಪಿ ಮಾಡುತ್ತಿರುವ ಸರಣಿ ಅವಮಾನ: ರಕ್ಷಿತ್ ಶಿವರಾಂ

Prasthutha|

ಮಂಗಳೂರು: ಮನುಜ ಜಾತಿ ತಾನೊಂದೆ ವಲಂ ಎಂದು ವಿಶ್ವ ಮಾನವ ಸಂದೇಶ ಸಾರಿದ ಆದಿಕವಿ ಪಂಪನ ಹೆಸರಿನ ರಸ್ತೆಗೆ ಬಿಜೆಪಿ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರ ಮೂಲಕ ಮರು ನಾಮಕರಣ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದ್ದಾರೆ.

- Advertisement -


ಚಾಮರಾಜಪೇಟೆಯಲ್ಲಿರುವ ಮಹಾಕವಿ ಪಂಪನ ಹೆಸರಿನ ರಸ್ತೆಗೆ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಬದಲಾಯಿಸಲು ಕಸಾಪ ಅಧ್ಯಕ್ಷರು ಹಾಗೂ ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರಕ್ಕೆ ಸಾಹಿತ್ಯ ಪರಿಷತ್ ಪ್ರಸ್ತಾವನೆ ಸಲ್ಲಿಸಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಒಪ್ಪಿಗೆ ಕೂಡ ಸೂಚಿಸಿದ್ದಾರೆ. ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ಅಮೂಲಾಗ್ರ ಕೊಡುಗೆ ನೀಡಿರುವ ಆದಿಕವಿ, ಮಹಾಕವಿ ಪಂಪನ ಹೆಸರಿನ ರಸ್ತೆಗೆ ಮರುನಾಮಕರಣ ಮಾಡುತ್ತಿರುವುದು ನಿಜಕ್ಕೂ ಖೇದಕರ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ನಿರಂತರವಾಗಿ ಜೈನ ಸಮುದಾಯಕ್ಕೆ ಅಪಮಾನಗಳನ್ನ ಮಾಡುತ್ತಲೇ ಬಂದಿದ್ದಾರೆ. ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಅವಮಾನಗಳನ್ನ ಮಾಡಲಾಗಿದೆ. ಜೈನ ಧರ್ಮದ ಸ್ಥಾಪಕರನ್ನು ಏಕ ವಚನದಲ್ಲಿ ಸಂಬೋಧಿಸಲಾಗಿದೆ. ಪಠ್ಯ ಪುಸ್ತಕದಿಂದಲೇ ಜೈನ ಸಮುದಾಯದವರ ಮಾಹಿತಿಗಳಿಗೂ ಕೊಕ್ಕೆ ಹಾಕಲಾಯಿತು. ಇಂತಹ ಅವಮಾನಗಳನ್ನ ಬಿಜೆಪಿ ಸರ್ಕಾರ ನಿರಂತರವಾಗಿ ನಡೆಸುತ್ತಲೇ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಆದಿಕವಿ ಪಂಪನ ಹೆಸರನ್ನು ಬದಲಾವಣೆ ಮಾಡುತ್ತಿರುವ ಹಿಂದಿನ ಷಡ್ಯಂತ್ರವನ್ನ ಜೈನ ಸಮುದಾಯ ಹಾಗೂ ಸಾಹಿತ್ಯಗಳ ಖಂಡಿಸಬೇಕಿದೆ. ಯಾವುದೇ ಕಾರಣಕ್ಕೂ ಹೆಸರು ಮರುನಾಮಕರಣಕ್ಕೆ ಅವಕಾಶ ನೀಡಬಾರದು ಹಾಗೂ ಮರು ನಾಮಕರಣದ ಪ್ರಸ್ತಾಪವನ್ನ ಹಿಂಪಡೆಯಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



Join Whatsapp