ಮೈಸೂರು ಮೇಯರ್ ಚುನಾವಣೆ: ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರಿಗೆ ಚಾಕಲೇಟ್ ನೀಡಿ ವಂಚಿಸುತ್ತಿದೆ.: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

- Advertisement -

ಮೈಸೂರು: ಮೈಸೂರು ಮೇಯರ್ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನ ಎಂ.ಎಲ್.ಎ, ಎಂ.ಎಲ್.ಸಿ, ಕಾರ್ಪೊರೇಟರ್ ಮತ್ತು ಇತರೆ ನಾಯಕರಿಗೆ ಮೀಸಲಾತಿ ಕ್ಷೇತ್ರದಲ್ಲಿ ಜಾತಿ ಪ್ರಮಾಣಪತ್ರ ನೀಡಲು ಸಿದ್ಧತೆ ಮಾಡಬೇಕಾದ ಸಾಮಾನ್ಯ ಜ್ಞಾನ ಇರಲಿಲ್ಲವೆ? ಜೆಡಿಎಸ್ ನ ಜಿಲ್ಲಾಧ್ಯಕ್ಷರು ಇದಕ್ಕೆ ಹೊಣೆಯಲ್ಲವೆ? ಅಲ್ಪಸಂಖ್ಯಾತರನ್ನು ಅಧಿಕಾರದಿಂದ ದೂರ ಇಟ್ಟು ಬಿಜೆಪಿಗೆ ಅಧಿಕಾರ ಕೊಡುವ ದುರುದ್ದೇಶದಿಂದ ಜೆಡಿಎಸ್ ಈ ರೀತಿಯ ವಂಚನೆ ಮಾಡಿದೆ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷ ರಾದ ಅಬ್ದುಲ್ ಮಜೀದ್ ಮೈಸೂರು ಅವರು ಆಕ್ರೋಶ ಹೊರಹಾಕಿದರು.

ಇನ್ನು ಕಾಂಗ್ರೆಸ್ ಸೋಲುವ ಸನ್ನಿವೇಶಗಳಲ್ಲಿ ಮಾತ್ರ ಅಲ್ಪಸಂಖ್ಯಾತರನ್ನು ಅಭ್ಯರ್ಥಿಯಾಗಿ ಘೋಷಿಸುತ್ತದೆ. ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದಿದ್ದರೆ ಹಸ್ರತ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ ಜೆಡಿಎಸ್ ನೊಂದಿಗೆ ಮೈತ್ರಿಗೆ ಪ್ರಯತ್ನಿಬೇಕಿತ್ತು. ಅದಕ್ಕೆ ಅವರ ಅಹಂ ಅಡ್ಡಿಯಾಗುತ್ತಿದ್ದರೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಮೈತ್ರಿ ಮಾಡಿಕೊಳ್ಳುವ ಮುಕ್ತ ಅವಕಾಶ ನೀಡಬೇಕಿತ್ತು. ಅದ್ಯಾವುದನ್ನು ಮಾಡದೆ ಸೋಲುವ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮತ್ತೊಮ್ಮೆ ಮುಸ್ಲಿಮರನ್ನು ವಂಚಿಸಿದೆ ಎಂದು ಅವರು ಆರೋಪಿಸಿದರು. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಲ್ಪಸಂಖ್ಯಾತರಿಗೆ ಚಾಕಲೇಟ್ ನೀಡಿ ವಂಚಿಸುವ ಕೆಲಸವನ್ನು ಮುಂದುವರಿಸಿವೆ ಎಂದು ಹೇಳಿದರು.

- Advertisement -

ಜೆಡಿಎಸ್ ನ 5 ಮುಸ್ಲಿಂ ಕಾರ್ಪೊರೇಟರ್ ಗಳು ಬಿಜೆಪಿಗೆ ಮತ ಹಾಕುವ ಮೂಲಕ ತಮ್ಮ ಸಮುದಾಯಕ್ಕೆ ಮಹಾದ್ರೋಹವನ್ನು ಎಸಗಿದ್ದಾರೆ, ಪ್ರಸ್ತುತ ಅಲ್ಪಸಂಖ್ಯಾತರಿಗೆ ಬಿಜೆಪಿಯವರು ಮಾಡುತ್ತಿರುವಂತಹ ತಾರತಮ್ಯ ಮತ್ತು ಶೋಷಣೆಯ ಬಗ್ಗೆ ಗೊತ್ತಿದ್ದರೂ ಕೂಡ ಇವರು ಬಿಜೆಪಿಗೆ ಮತ ಹಾಕಿದ್ದು ಜನದ್ರೋಹ ಎಂದು ಅಬ್ದುಲ್ ಮಜೀದ್ ಮುಸ್ಲಿಂ ಕಾರ್ಪೊರೇಟರ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರನ್ನು ಎಂದೂ ಅಧಿಕಾರ ಹಿಡಿಯಲು ಬಿಡುವುದಿಲ್ಲ. ನಿರಂತರವಾಗಿ ಜನರಿಗೆ ದ್ರೋಹ ಮಾಡುತ್ತಿರುವ ಮತ್ತು ಜಾತ್ಯಾತೀತ ನಿಲುವುಗಳಿಗೆ ದ್ರೋಹ ಬಗೆಯುತ್ತಿರುವ ಪಕ್ಷಗಳ ಬಗ್ಗೆ ಜನರು ಜಗೃತರಾಗಬೇಕು. ತಮ್ಮ ಪರವಾಗಿ ಸದಾ ದುಡಿಯುತ್ತಿರುವ ಮತ್ತು ಸಂವಿಧಾನದ ಆಶಯಗಳನ್ನು ಬಲಪಡಿಸಲು ಶ್ರಮಿಸುತ್ತಿರುವ ಎಸ್ಡಿಪಿಐಗೆ ಮುಂದಿನ ಚುನಾವಣೆಯಲ್ಲಿ ಜನ ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದರು.



Join Whatsapp