ನವದೆಹಲಿ: ಬಿಲ್ಕಿಸ್ ಬಾನೋ ಪ್ರಕರಣದ 11 ಮಂದಿ ಅತ್ಯಾಚಾರಿಗಳನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ನಡೆಯ ಬಗ್ಗೆ 2012 ರ ದೆಹಲಿ ಗ್ಯಾಂಗ್ ರೇಪ್ ಸಂತ್ರಸ್ತೆ ನಿರ್ಭಯಾ ತಾಯಿ ಆಕ್ರೋಶಗೊಂಡಿದ್ದಾರೆ.
ನಿರ್ಭಯಾ ಅವರ ತಾಯಿ ಆಶಾ ದೇವಿ ಕೂಡ ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದವರನ್ನು ಟೀಕಿಸಿದ್ದು, ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಅತ್ಯಾಚಾರಿಗಳಿಗೆ ಆತ್ಮೀಯ ಸ್ವಾಗತ ನೀಡುವುದನ್ನು ನೋಡಿದಾಗ ರಕ್ತ ಕುದಿಯುತ್ತದೆ ಎಂದು ಹೇಳಿದರು.
ನಡೆಯುತ್ತಿರುವ ಎಲ್ಲವೂ ಸಂಪೂರ್ಣವಾಗಿ ತಪ್ಪು ಮತ್ತು ನಾಚಿಕೆಗೇಡಿನ ಸಂಗತಿ. ಅತ್ಯಾಚಾರಿಗಳ ಬಗ್ಗೆ ಕೆಲವು ಜನರ ಇಂತಹ ವರ್ತನೆಗಳು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸೋಮವಾರದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಕೆಲವೇ ಗಂಟೆಗಳ ನಂತರ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಗುಜರಾತ್ ಸರ್ಕಾರ ರದ್ದುಗೊಳಿಸಿದೆ,
2002ರ ಗುಜರಾತ್ ದಂಗೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ 3 ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರ ಕೊಲೆ ಪ್ರಕರಣದಲ್ಲಿ ಈ ಹನ್ನೊಂದು ಮಂದಿ ಬಿಡುಗಡೆಗೊಂಡಿದ್ದರು.