ಚೆನ್ನೈ : ‘ಜೈಭೀಮ್’ ತಮಿಳು ಚಿತ್ರದಲ್ಲಿ ವಣ್ಣಿಯಾರ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪದ ಮೇಲೆ ನಟ ಸೂರ್ಯ ಶಿವಕುಮಾರ್ ಮತ್ತು ನಿರ್ದೇಶಕ ಟಿ.ಜೆ.ಜ್ಞಾನವೇಲ್ರಾಜ ವಿರುದ್ಧ ನಗರ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದು ಮಾಡಿದೆ.
ವಣ್ಣಿಯಾರ್ ಸಮುದಾಯವನ್ನು ನಿಂದಿಸಲಾಗಿದೆ ಎಂದು ದೂರಿ ವಕೀಲ ಕೆ ಸಂತೋಷ್ ಎಂಬವರು ಮಾಜಿಸ್ಟ್ರೇಟ್ ಗೆ ಅರ್ಜಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಮೇ 17 ರಂದು ಸೂರ್ಯ ಮತ್ತು ಜ್ಞಾನವೇಲ್ರಾಜಾ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿತ್ತು.
ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಸೂರ್ಯ ಪರ ವಕೀಲರು ಈ ಚಲನಚಿತ್ರ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಅವರು ವಕೀಲರಾಗಿದ್ದಾಗ ನಡೆದ ಪ್ರಕರಣವನ್ನು ಆಧರಿಸದ್ದಾಗಿದೆ ಮತ್ತು ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಪೆರುಮಾಳ್ಸಾಮಿ ಅವರ ಹೆಸರನ್ನು ಹೊರತುಪಡಿಸಿ, ಇತರ ಎಲ್ಲಾ ಪಾತ್ರಗಳ ಹೆಸರುಗಳನ್ನು ಬದಲಾಯಿಸಲಾಗಿದೆ.
ಜೊತೆಗೆ ವಣ್ಣಿಯಾರ್ ಗಳನ್ನು ತೋರಿಸುವ ಕ್ಯಾಲೆಂಡರ್ ಅನ್ನು ಸಹ ಚಲನಚಿತ್ರದಿಂದ ತೆಗೆದುಹಾಕಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರ ಪೀಠವು ಸೂರ್ಯ ಮತ್ತು ನಿರ್ದೇಶಕರ ಮೇಲಿನ ಎಫ್ಐಆರ್ ಅನ್ನು ರದ್ದುಗೊಳಿಸಿದೆ.