ಕಾಮನ್‌ವೆಲ್ತ್‌ ಗೇಮ್ಸ್‌ | ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆ !

Prasthutha|

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅದ್ಧೂರಿ ತೆರೆಬಿದ್ದಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಪರ್ಧಿಗಳು, ತರಬೇತುದಾರರು ತಮ್ಮ ತಮ್ಮ ದೇಶಗಳತ್ತ ಮರಳುತ್ತಿದ್ದಾರೆ. ಆದರೆ ಈ ನಡುವೆ ಕಾಮನ್​ವೆಲ್ತ್​ ಕ್ರೀಡಾ ಗ್ರಾಮದಿಂದ ನಾಪತ್ತೆಯಾದ ಕ್ರೀಡಾಪಟುಗಳ ಸಂಖ್ಯೆ ಹನ್ನೆರಡಕ್ಕೆ ಏರಿಕೆಯಾಗಿದೆ.

- Advertisement -

ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಲು ತೆರಳಿದ್ದ ಇಬ್ಬರು ಪಾಕಿಸ್ತಾನದ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ. ಬಾಕ್ಸರ್​ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ಅವರು ಇಸ್ಲಾಮಾಬಾದ್‌ಗೆ ಮರಳುವ ಕೆಲ ಗಂಟೆಗಳ ಮೊದಲು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ ಕಾರ್ಯದರ್ಶಿ ನಾಸರ್ ಟಾಂಗ್  ಖಚಿತಪಡಿಸಿದ್ದಾರೆ.

ಈ ಇಬ್ಬರು ಆಟಗಾರರ ಪಾಸ್‌ಪೋರ್ಟ್‌ ಮತ್ತು ಇತರ ದಾಖಲೆಗಳು ಅಧಿಕಾರಿಗಳ ಬಳಿ ಇವೆ. ಕಾಮನ್‌ವೆಲ್ತ್‌ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ  ಯಾವುದೇ ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು. ವೇಟ್ ಲಿಫ್ಟಿಂಗ್ ಮತ್ತು ಜಾವೆಲಿನ್ ಎಸೆತದಲ್ಲಿ ಎರಡು ಚಿನ್ನ ಸೇರಿದಂತೆ ಪಾಕಿಸ್ತಾನ ಒಟ್ಟು ಎಂಟು ಪದಕಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

- Advertisement -

ಇದಕ್ಕೂ ಮೊದಲು ಹಂಗೇರಿಯಲ್ಲಿ ನಡೆದ ಫಿನಾ ವಿಶ್ವ ಚಾಂಪಿಯನ್‌ಶಿಪ್‌ ವೇಳೆ  ಪಾಕ್‌ ಈಜುಗಾರ ಫೈಜಾನ್ ಅಕ್ಬರ್ ನಾಪತ್ತೆಯಾಗಿದ್ದರು. ಜೂನ್‌ ತಿಂಗಳಲ್ಲಿ ನಾಪತ್ತೆಯಾಗಿದ್ದ ಅಕ್ಬರ್ ಸುಳಿವು ಇಲ್ಲಿಯವರೆಗೂ ಪತ್ತೆಯಾಗಿಲ್ಲ.

ಪಾಕ್‌ ಕ್ರೀಡಾಪಟುಗಳಿಗಿಂತಲೂ ಮೊದಲು ಶ್ರೀಲಂಕಾದಿಂದ ತೆರಳಿದ್ದ ಕ್ರೀಡಾಪಟುಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಾಪತ್ತೆಯಾಗಿದ್ದರು. ಕುಸ್ತಿ, ಜೂಡೋ ಹಾಗೂ ವಾಲಿಬಾಲ್ ತಂಡದಲ್ಲಿದ್ದ ಎಂಟು ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಆಟಗಾರರು ಇದುವರೆಗೂ ಸ್ವದೇಶಕ್ಕೆ ಮರಳಿಲ್ಲ.  ದ್ವೀಪ ರಾಷ್ಟ್ರದ  ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಟಗಾರರು ಕೆಲಸ ಮಾಡುವ ಉದ್ದೇಶದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

Join Whatsapp