ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

Prasthutha|

ಟೋಕಿಯೋ: ನವೆಂಬರ್’ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಸಿದ್ಧತೆ ಚುರುಕುಗೊಳಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್ ಆರ್. ನಿರಾಣಿ, ಜಪಾನ್ ಗೆ ಭೇಟಿ ನೀಡಿದ್ದಾರೆ.

- Advertisement -

ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲು ಸಚಿವ ನಿರಾಣಿ ನೇತೃತ್ವದ ನಿಯೋಗ ಜಪಾನ್ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಟೋಕಿಯೋ ಕನ್ನಡ ಬಳಗ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅಲ್ಲದೆ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಹ್ವಾನ ನೀಡಿದರು.

“ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್ ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು,” ಎಂದು ನಿರಾಣಿ ಭರವಸೆ ನೀಡಿದರು.

- Advertisement -

“ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.38,” ಎಂದು ಅವರು ವಿವರಿಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ಮಟ್ಟಕ್ಕೇರಿದೆ. ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಳೆದ 3-4 ತಿಂಗಳಿಂದೀಚೆಗೆ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟೋಕಿಯೊ ಕನ್ನಡ ಬಳಗದ ಗಣೇಶ್ ಕೃಷ್ಣಯ್ಯ, “ಟೋಕಿಯೋ ಕನ್ನಡ ಬಳಗದಲ್ಲಿ 1000ಕ್ಕೂಹೆಚ್ಚು ಸದಸ್ಯರಿದ್ದು, ಜಪಾನಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಿಣಿಸಿ ಹಲವು ಕನ್ನಡಿಗರು ಇಲ್ಲಿನ ಸರ್ಕಾರದ ಗೌರವಕ್ಕೆ ಪಾತ್ರರಾಗಿದ್ದಾರೆ. ಕನ್ನಡ ಬಳಗ ಆಯೋಜಿಸುವ ಯುಗಾದಿ ಉತ್ಸವದಲ್ಲಿ ಜಪಾನ್ ನಾಗರಿಕರು ಪಾಲ್ಗೊಂಡು ಸಂಭ್ರಮಿಸುತ್ತಾರೆ,” ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಮಯಾಂಕ್ ಜೋಶಿ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಮನೋಜ್ ಸಿಂಗ್ ನೇಗಿ, ಹಾಗೂ ಕನ್ನಡ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಜಪಾನ್ ಕನ್ನಡಿಗರ ಹರ್ಷೋದ್ಘಾರ

ಟೋಕಿಯೋ ಕನ್ನಡ ಬಳಗದೊಂದಿಗಿನ ಸಭೆಯಲ್ಲಿ ‘ಎಲ್ಲಾದರು ಇರು ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು’…..ಎಂಬ ಕವಿವಾಣಿಯೊಂದಿಗೆ ಸಚಿವರು ಭಾಷಣ ಆರಂಭಿಸಿದಾಗ ಸಭೆಯಲ್ಲಿ ಹರ್ಷೋದ್ಗಾರ ಕೇಳಿಬಂತು.



Join Whatsapp