ಕಣ್ಣೂರು: ಉತ್ತರ ಕೇರಳದ (ಮಲಬಾರ್)ಲ್ಲಿ ಮೊತ್ತ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಮುಸ್ಲಿಂ ಮಹಿಳೆ ಪಿಎಂ ಮರಿಯುಮ್ಮ (99) ಇಂದು ನಿಧನರಾಗಿದ್ದಾರೆ.
ಇಲ್ಲಿನ ತಲಶ್ಶೇರಿಯ ಟಿಸಿ ಮುಕ್ಕ್‌ನ ಪುದಿಯ ಮಾಳಿಯೇಕಲ್ ತರವಾಡ್ ಎಂಬ ಹಳೇ ಸಾಂಪ್ರದಾಯಿಕ ಪ್ರತಿಷ್ಠಿತ ಮುಸ್ಲಿಂ ಕುಟುಂಬದಿಂದ ಬಂದಿದ್ದ ಮರಿಯುಮ್ಮ ಮಲಬಾರ್ (ಉತ್ತರ ಕೇರಳ) ನಲ್ಲಿ ಮೊಟ್ಟಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದರು.
1938ರಲ್ಲಿ ಮರಿಯುಮ್ಮ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿ ಇಂಗ್ಲೀಷ್ ಶಿಕ್ಷಣ ಪಡೆದಿದ್ದರು. ಈ ಕಾಲದಲ್ಲಿ ಬ್ರಿಟೀಷರೊಂದಿಗಿನ ವೈರತ್ವ ಮತ್ತು ಧಾರ್ಮಿಕ ಕಾರಣಕ್ಕಾಗಿ ಮಸ್ಲಿಂ ಯುವತಿಯರು ಇಂಗ್ಲಿಷ್ ಶಿಕ್ಷಣದಿಂದ ದೂರವೇ ಉಳಿದಿದ್ದರು.
ಈ ನಡುವೆಯೂ ಮಂಗಳೂರು ಮೂಲದ ಸೇಕ್ರೆಡ್ ಹಾರ್ಟ್ ಎಂಬ ಕಾನ್ವೆಂಟ್ ಶಾಲೆಯಲ್ಲಿ ಇಂದಿನ ಹತ್ತನೇ ತರಗತಿಗೆ ಸಮಾನವಾದ ‘ಫಿಫ್ತ್ ಫೋರಂ’ ಶಿಕ್ಷಣವನ್ನು ಮುಗಿಸಿದ್ದರು.
1943ರಲ್ಲಿ ಮರಿಯುಮ್ಮ ಅವರ ಮದುವೆ ನಡೆಯಿತು. ಬಳಿಕ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ನಿಲ್ಲಿಸಿದ್ದರು. ಆದರೂ ಮರಿಯುಮ್ಮ ಮಹಿಳಾ ಶಿಕ್ಷಣ ಸಹಿತ ಹಲವು ಸಮಾಜ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮರಿಯುಮ್ಮ ಉತ್ತಮವಾಗಿ ಇಂಗ್ಲಿಷ್ ಮಾತನಾಡುತ್ತಿದ್ದುದಲ್ಲದೇ ಇಂಗ್ಲಿಷ್ ನಲ್ಲಿ ಆಕರ್ಷಕ ಭಾಷಣವನ್ನು ಮಾಡುತ್ತಿದ್ದರು.
ಮರಿಯುಮ್ಮ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸಂತಾಪ ಸೂಚಿಸಿದ್ದೂ, ಪ್ರಗತಿಪರ ಮನಸ್ಥಿತಿ ಹೊಂದಿದ್ದ ಮರಿಯುಮ್ಮ ವಿರೋಧವನ್ನು ಲೆಕ್ಕಿಸದೇ ಇಂಗ್ಲಿಷ್ ಶಿಕ್ಷಣ ಪಡೆದರು. ಈ ಮೂಲಕ ತಲಶ್ಶೇರಿಯ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತನ್ನು ಛಾಪಿಸಿದ್ದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದಿದ್ದಾರೆ.